ದೇಶ

ಆಂಜನೇಯ ಬೆಲೆ ತೆರಲೇಬೇಕು: ದೇವನೂರು ಮಹಾದೇವ

Srinivasamurthy VN

ಬೆಂಗಳೂರು: ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಲಂಚ ಪ್ರಕರಣದ ಸಂಬಂಧ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಬೆಲೆ ತೆರಲೇಬೇಕು, ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಸುದ್ದಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಚಿವ ಆಂಜನೇಯ ಅವರ ಪತ್ನಿ ವಿಜಯಾ ಅವರು ಲಂಚ ಪ್ರಕರಣದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಹಾದೇವ ಅವರು, “ಆಂಜನೇಯ ಅವರು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲಿ" ಎಂದು ಹೇಳಿದ್ದಾರೆ. “ಈಗಾಗಿರುವ ತಪ್ಪಿನಿಂದ ಸಚಿವ ಆಂಜನೇಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಅವರು ಬೆಲೆ ತೆರಲೇಬೇಕು. ಇಷ್ಟರಲ್ಲೇ ಆಗಿದ್ದು ತುಂಬಾ ನೋವು ತಂದಿದೆ. ಆರೋಪ ಮತ್ತು ಅಪಮಾನವನ್ನು ಎದುರಿಸುವುದನ್ನು ಬಿಟ್ಟರೆ ಅವರಿಗೆ ಬೇರೆ ದಾರಿಯೇ ಇಲ್ಲ. ಸಚಿವ ಆಂಜನೇಯ ರಾಜಿನಾಮೆ ಕೊಡುವುದು ಅವರ ಆತ್ಮಸಾಕ್ಷಿಗೆ ಬಿಟ್ಟದ್ದು, ಜತೆಗೆ ಮುಖ್ಯಮಂತ್ರಿ ವಿವೇಚನೆಗೆ ಸೇರಿದ್ದು, ಸಾರ್ವಜನಿಕವಾಗಿ ಸಂಪುಟದಲ್ಲಿ ಉಳಿಸಿ ಎಂದು ಹೇಳುವುದು ತಪ್ಪು", ಎಂದಿದ್ದಾರೆ.

“ಆಂಜನೇಯ ತುಂಬಾ ಇಷ್ಟವಾದ ವ್ಯಕ್ತಿ. ಅವರೊಬ್ಬ ತುಂಬಾ ಸರಳ, ಹುಂಬ; ಉತ್ಸಾಹ ಜಾಸ್ತಿ. ಸಾಮಾಜಿಕ ಕಾಳಜಿ ಇಟ್ಟುಕೊಂಡಿದ್ದರೂ ಏಕೆ ಹೀಗಾಯಿತು? ನಿಜಕ್ಕೂ ವಿಷಾದ  ವ್ಯಕ್ತಪಡಿಸುತ್ತೇನೆ", ಎಂದು ಹೇಳಿದ್ದಾರೆ.

SCROLL FOR NEXT