ಮಹಮ್ಮದ್ ಅಕ್ಲಾಖ್‌ನ ಪುತ್ರ ಸರ್‌ತಾಜ್
ಬಿಸಾಡಾ (ದಾದ್ರಿ): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಯ ಗೆಲುವು ನನ್ನಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ ಎಂದು ದಾದ್ರಿಯಲ್ಲಿ ಹತ್ಯೆಗೀಡಾದ ಮಹಮ್ಮದ್ ಅಕ್ಲಾಖ್‌ನ ಪುತ್ರ ಸರ್‌ತಾಜ್ ಹೇಳಿದ್ದಾರೆ.
ಗೋಮಾಂಸ ಭಕ್ಷಣೆ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಉತ್ತರಪ್ರದೇಶದ ದಾದ್ರಿಯಲ್ಲಿ ಅಕ್ಲಾಕ್ ನ್ನು ಮನೆಯಿಂದ ಹೊರಗೆಳೆದು ಕೆಲ ಜನರ ಗುಂಪು ಹೊಡೆದು ಸಾಯಿಸಿತ್ತು. ಆ ಮೇಲೆ ಈ ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಅಕ್ಲಾಕ್ ಮನೆಯಲ್ಲಿ ಗೋಮಾಂಸವಿರಲಿಲ್ಲ ಅಲ್ಲಿದ್ದದ್ದು ಮೇಕೆ ಮಾಂಸ ಎಂದು ತಿಳಿದು ಬಂದಿತ್ತು.
ವಾಯುಸೇನೆಯಲ್ಲಿ ಕಾರ್ಪರಲ್ ಆಫೀಸರ್ ಆಗಿದ್ದಾನೆ ಅಕ್ಲಾಕ್ ನ ಹಿರಿಯ ಮಗ ಸರ್‌ತಾಜ್.
ಹಗೆತನದ ರಾಜಕೀಯಕ್ಕೆ ದೇಶದಲ್ಲಿ ಸ್ಥಾನವಿಲ್ಲ ಎಂಬುದು ಗೊತ್ತಾಯ್ತು. ಬಿಹಾರ ಚುನಾವಣಾ ಫಲಿತಾಂಶ ನನ್ನ ಅಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ. ಈ ಗೆಲವು ಜಾತಿ ವಿರೋಧಿ, ಧರ್ಮವಿರೋಧದ ವಿರುದ್ಧ ಸಿಕ್ಕ ಗೆಲುವು. ಧರ್ಮಗಳಲ್ಲಿ ದ್ವೇಷ ಹರಡಿ ಹೋರಾಟ ಮಾಡಿದುದರಲ್ಲಿ ಏನೂ ಪ್ರಯೋಜನವಿಲ್ಲ, ಜನರ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಧಿಕಾರಕ್ಕೇರಿದ ನಂತರ ದೇಶವನ್ನು ವಿಭಜಿಸುವ ಕೆಲಸ ಮಾಡಬೇಡಿ, ಇದು ಎಲ್ಲ ರಾಜಕಾರಣಿಗಳಲ್ಲಿ ನಾನು ಮಾಡುವ ವಿನಂತಿ ಎಂದು ಸರ್‌ತಾಜ್ ಹೇಳಿದ್ದಾರೆ.