ನವದೆಹಲಿ: ಪಕ್ಷ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೆ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎಂದು ಬಿಜೆಪಿ ಸಂಸದ ಬಾಲಿವುಡ್ ನಟ ಶತ್ರುಘ್ನ ಸಿನ್ನಾ ಅವರು ಸೋಮವಾರ ಹೇಳಿದ್ದಾರೆ.
'ನಾನು ಕೊಚ್ಚಿಕೊಳ್ಳುತ್ತಿಲ್ಲ. ಆದರೆ ಬಿಹಾರ ಜನತೆಯ ನಾಯಕ, ಈ ಮಣ್ಣಿನ ಮಗ ಹಾಗೂ ಬಿಹಾರಿ ಬಾಬುನನ್ನು ಈ ಚುನಾವಣೆಯಲ್ಲಿ ಕಡೆಗಣಿಸಲಾಯಿತು. ಇದು ನನ್ನ ಬೆಂಬಲಿಗರ ಹಾಗೂ ಅಭಿಮಾನಿಗಳ ಮೇಲೆ ಪರಿಣಾಮ ಬೀರಿತು ಅಂತ ನನಗೆ ಅನಿಸುತ್ತಿದೆ' ಎಂದಿದ್ದಾರೆ.
'ಒಂದು ವೇಳೆ ನನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದರೆ, ಫಲಿತಾಂಶದಲ್ಲಿ ಎಷ್ಟು ವ್ಯತ್ಯಾಸ ಆಗುತ್ತಿತ್ತು ಅಂತ ಹೇಳಲಿಕ್ಕಾಗಲ್ಲ. ಆದರೆ ಒಂದಷ್ಟು ವ್ಯತ್ಯಾಸ ಅಂತು ಖಂಡಿತ ಆಗುತ್ತಿತ್ತು. ಈಗ ಬಂದಿರುವುದಕ್ಕಿಂತ ಹೆಚ್ಚು ಸ್ಥಾನಗಳು ಬಿಜೆಪಿ ಬರುತ್ತಿದ್ದವು' ಎಂದು ಬಾಲಿವುಡ್ ನಟ ಹೇಳಿರುವುದಾಗಿ ಸುದ್ದಿ ವಾಹನಿಯೊಂದು ವರದಿ ಮಾಡಿದೆ.
ಕೇಂದ್ರದಲ್ಲಿ ನಿಮ್ಮನ್ನು ಸಚಿವರನ್ನಾಗಿ ಮಾಡದಿರುವ ಬಗ್ಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, ಇವೆಲ್ಲಾ ಹಳೆ ಡೈಲಾಗಗಳು, ಇದನ್ನೇ ಹೇಳಿಕೊಂಡು ಕೆಲವರು ಹಲವು ಹುದ್ದೆಗಳನ್ನು ಪಡೆದುಕೊಂಡಿದ್ದಾರೆ ಎಂದರು.