ದೇಶ

ಮೈತ್ರಿ ಸರ್ಕಾರವಾದರೂ ನಿತೀಶ್ ಸಂಪುಟದಲ್ಲಿ ಡಿಸಿಎಂ ಹುದ್ದೆ ಇಲ್ಲ

Srinivasamurthy VN

ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚನೆಯತ್ತ ಚಿತ್ತ ಹರಿಸಿರುವ ನಿತೀಶ್ ಕುಮಾರ್ ನೇತೃತ್ವದ ಮಹಾಘಟ್ ಬಂಧನ ಮೈತ್ರಿಕೂಟ ತನ್ನ ನೂತನ  ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಮೂಲಗಳ ಪ್ರಕಾರ ಆರ್ ಜೆಡಿ ಪಕ್ಷ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿರುವುದರಿಂದ ಅದು ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು.  ಅಲ್ಲದೆ ಲಾಲು ಪ್ರಸಾದ್ ಅವರ ಇಬ್ಬರು ಪುತ್ರರಿಗೆ ಉಪ ಮುಖ್ಯಮಂತ್ರಿ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ ರಾಜಕೀಯ ಪಂಡಿತರ ಈ ಎಲ್ಲ ಲೆಕ್ಕಾಚಾರಗಳನ್ನು ಆರ್ ಜೆಡಿ ಮುಖ್ಯಸ್ಥ  ಲಾಲು ಪ್ರಸಾದ್ ಯಾದವ್ ಬುಡಮೇಲು ಮಾಡಿದ್ದು, ನೂತನ ಸಂಪುಟದಲ್ಲಿ ಯಾವುದೇ ರೀತಿಯ ಉಪಮುಖ್ಯಮಂತ್ರಿ ಹುದ್ದೆ ರಚನೆ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಆರ್ ಜೆಡಿ ಪಕ್ಷದ ಮೂಲಗಳು ತಿಳಿಸಿರುವಂತೆ ಲಾಲು ಪುತ್ರರಿಗೆ ಡಿಸಿಎಂ ಪಟ್ಟ ಕಟ್ಟಿದರೆ ಪಕ್ಷದಲ್ಲಿರುವ ಹಿರಿಯ ನಾಯಕರಿಂದ ಬಂಡಾಯ ಎದುರಿಸಬೇಕಾಗುತ್ತದೆ ಎಂಬ ಆತಂಕದಿಂದಾಗಿ  ಲಾಲು ಪ್ರಸಾದ್ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಚುನಾವಣೆಗೆ ಮುನ್ನ ಲಾಲು ಪ್ರಸಾದ್ ಯಾದವ್ ಅವರು ಕುಟುಂಬ ರಾಜಕೀಯ ನಡೆಸುತ್ತಿದ್ದಾರೆ.  ಅವರ ಪುತ್ರರಿಗೆ ಪಟ್ಟ ಕಟ್ಟಲು ಲಾಲು ಪಕ್ಷದ ಕಾರ್ಯಕರ್ತರನ್ನು ಮತ್ತು ಇತರೆ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಆರ್‌ಜೆಡಿ ಹಿರಿಯ ಮುಖಂಡ ರಘುನಾಥ್ ಝಾ  ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಈಗ ಅಂಥದ್ದೇ ಪರಿಸ್ಥಿತಿ ಮರುಕಳಿಸಬಾರದು ಎಂಬ ಕಾರಣಕ್ಕೆ ಲಾಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.

ಇನ್ನು ನೂತನ ನಿತೀಶ್ ಕುಮಾರ್ ನೇತೃತ್ವದ ಸಂಪುಟದಲ್ಲಿ ಲಾಲು ಪ್ರಸಾದ್ ಅವರ ಇಬ್ಬರು ಪುತ್ರರಾದ ತೇಜ್‌ ಪ್ರತಾಪ್‌ ಮತ್ತು ತೇಜಸ್ವಿ ಪ್ರಸಾದ್‌ ಅವರು ಸಚಿವರಾಗಿಯೇ  ಮುಂದುವರೆಯಲಿದ್ದು, ಎರಡು ಪ್ರಮುಖ ಹುದ್ದೆಗಳ ಜವಾಬ್ದಾರಿಯನ್ನು ಇವರಿಗೆ ನೀಡುವ ಸಾಧ್ಯತೆ ಇದೆ. ಲಾಲು ಅವರ ಇಬ್ಬರು ಪುತ್ರರಾದ ತೇಜ್‌ ಪ್ರತಾಪ್‌ ಮತ್ತು ತೇಜಸ್ವಿ ಪ್ರಸಾದ್‌ ಈ  ಬಾರಿ ಮಹುವಾ ಮತ್ತು ರಾಘೋಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ವಿಧಾನಸಭೆಯ ಸಂಖ್ಯಾಬಲ ಅನ್ವಯ ರಾಜ್ಯದಲ್ಲಿ 36 ಸಚಿವರು ನಿಯುಕ್ತಿಗೊಳ್ಳಬಹುದಾಗಿದೆ. ಇದರನ್ವಯ ನಿತೀಶ್‌  ಸೇರಿ ಜೆಡಿಯುನ 15, ಆರ್‌ಜೆಡಿಯ 16 ಮತ್ತು ಕಾಂಗ್ರೆಸ್‌ನ 6 ಶಾಸಕರು ಸಚಿವರಾಗಿ ನೇಮಕಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

SCROLL FOR NEXT