ನವದೆಹಲಿ/ಬೆಂಗಳೂರು: ಹಿರಿಯರ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ನಾನು ಹೇಳಿಯೇ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಪಾದಿಸಿದ್ದಾರೆ. ಜತೆಯಲ್ಲೇ ಹಿರಿಯರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷ ಇದನ್ನು ಚರ್ಚಿಸಲಿದೆ ಎಂದು ಗಡ್ಕರಿ ಮಾತಿಗೆ ವೆಂಕಯ್ಯನಾಯ್ಡು ಕೂಡ ದನಿಗೂಡಿಸಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾಗಿರುವ ಹಾಗೆ ನಾನು ಹೇಳಿಯೇ ಇಲ್ಲ. ಇದೆಲ್ಲವೂ ಅವುಗಳದ್ದೇ ಸೃಷ್ಟಿ ಎಂದಿದ್ದಾರೆ. ಆಡ್ವಾಣಿ ಅವರ ನೇತೃತ್ವದಲ್ಲೂ ಬಿಜೆಪಿ ಚುನಾವಣೆಗಳನ್ನು ಸೋತಿದೆ ಎಂದು ಹೇಳಿದ್ದ ಗಡ್ಕರಿ ಅವರು ಆಡ್ವಾಣಿ ಮತ್ತಿತರರು ಬಿಹಾರ ಸೋಲಿನ ಬಗ್ಗೆ ಎತ್ತಿರುವ ವಿಷಯಗಳ ಬಗ್ಗೆ ಪಕ್ಷವು ಚರ್ಚಿಸಲಿದೆ ಎಂದಿದ್ದಾರೆ.
ಆಡ್ವಾಣಿ, ಜೋಷಿ, ಯಶವಂತ ಸಿನ್ಹಾ ಸೇರಿದಂತೆ ಹಿರಿಯರು ಅತ್ಯಂತ ಗೌರವಾನ್ವಿತ ನಾಯಕರು, ನಾನಾಗಲೀ ಪಕ್ಷದ ಇತರ ಯಾವುದೇ ನಾಯಕರಾಗಲೀ ಹಿರಿಯರಿಗೆ ಅಗೌರವ ತೋರಿಸಿಲ್ಲ. ಹಿರಿಯರ ವಿರುದ್ಧ ವಿವರಣೆ ಕೇಳುವ ಅಥವಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಯಾರೂ ಒತ್ತಾಯಿಸಿಲ್ಲ ಎಂದಿದ್ದಾರೆ.
ಹಿರಿಯರ ಮಾತು ಗಂಭೀರವಾದದ್ದು: ಹಿರಿಯರ ಹೇಳಿಕೆಯನ್ನು ಗಂಭೀರವಾಗಿ ಪರಿಣಿಸಲಾಗುತ್ತದೆ, ಪಕ್ಷದ ವೇದಿಕೆಯಲ್ಲಿ ಆ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಅವರು, ಬಿಜೆಪಿ ಸೋಲನ್ನು ಯಾವುದೋ ಒಬ್ಬ ವ್ಯಕ್ತಿಗೆ ಹೊಣೆ ಮಾಡುವುದು ಸರಿಯಲ್ಲ.
ಹೊಣೆ ಮಾಡುವುದು ಬಿಜೆಪಿ ಸಂಸ್ಕೃತಿಯೂ ಅಲ್ಲ ಎಂದು ಪರೋಕ್ಷವಾಗಿ ಪಕ್ಷದ ಹಿರಿಯ ನಾಯಕರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು, ಜೊತೆಗೆ ಎಲ್ಲವನ್ನೂ ಪಕ್ಷ ಗಮನಿಸುತ್ತಿದೆ ಎಂದು ಹೇಳಿದರು. ಬಿಹಾರದ ಸೋಲಿಂದ ಧೃತಿಗೆಡಲ್ಲ.
ತಮಿಳುನಾಡು, ಬಂಗಾಳ ಸೇರಿ 5 ರಾಜ್ಯಗಳ ಚುನಾವಣೆಯತ್ತ ಗಮನಹರಿಸಲಿದ್ದೇವೆ. ಕರ್ನಾಟಕದ ಬಗೆಗೂ ಗಮನಹರಿಸಲು ಇದು ಸಕಾಲ ಎಂದರಲ್ಲದೇ, ರಾಜ್ಯದಲ್ಲಿ ಸ್ಥಳೀಯ ನಾಯಕರೇ ಸಿಎಂ ಅಭ್ಯರ್ಥಿಯಾಗುತ್ತಾರೆ, ದೆಹಲಿ ಯಿಂದ ಯಾವುದೇ ನಾಯಕರನ್ನು ತಂದು ಕೂರಿಸುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics