ಅಮರಾವತಿ: ನೆರೆಯ ಆಂಧ್ರ ಪ್ರದೇಶದಲ್ಲಿಯೂ ಭಾರಿ ಮಳೆ ಮುಂದುವರೆದಿದ್ದು, ಆಂಧ್ರದ ರಾಯಲಸೀಮಾ, ಚಿತ್ತೂರು, ತಿರುಪತಿ, ಅನಂತಪುರ, ಕಡಪ, ಕರ್ನೂಲು, ನೆಲ್ಲೂರು, ಗುಂಟುರು ಮತ್ತು ವಿಶಾಖಪಟ್ಟಣಂನಲ್ಲಿ ಭಾರಿ ಮಳೆಯಾಗುತ್ತಿದೆ.
ಭಾರಿ ಮಳೆಯಿಂದಾಗಿ ಆಂಧ್ರಪ್ರದೇಶದ ಸುಮಾರು 1250ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿದ್ದು, 11ಕ್ಕೂ ಹೆಚ್ಚು ಕೆರೆಗಳ ಕಟ್ಟೆ ಹೊಡೆದು ನೀರು ಸ್ಥಳೀಯ ಪ್ರದೇಶಗಳಿಗೆ ನುಗ್ಗಿದೆ. ಇನ್ನು ಭಾರಿ ಮಳೆಯ ಹಿನ್ನಲೆಯಲ್ಲಿ ಚಿತ್ತೂರಿನಲ್ಲಿ ಶಾಲಾ-ಕಾಲೇಜುಗಳಿಗೆ ಘೋಷಣೆ ಮಾಡಿರುವ ರಜೆಯನ್ನು ಮುಂದುವರೆಸಲಾಗಿದೆ. ಆಂಧ್ರದ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರಕಾಶಂ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಆಂಧ್ರ ಪ್ರದೇಶ ಸರ್ಕಾರ ಮಳೆ ಪೀಡಿತ 6 ಜಿಲ್ಲೆಗಳ ಡಿಸಿಗಳೊಂದಿಗೆ ಸಭೆ ನಡೆಸಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೂಚಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ವಿಪತ್ತು ಪಡೆಗೆ ಸೂಚನೆ ರವಾನಿಸಲಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾದರೆ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ತಿರುಮಲ ನಡಿಗೆ ಮಾರ್ಗ ಬಂದ್
ಇತ್ತ ಆಂಧ್ರ ಪ್ರದೇಶದ ತಿರುಪತಿಯಲ್ಲಿಯೂ ಭಾರಿ ಮಳೆಯಾಗುತ್ತಿದ್ದು, ಪವಿತ್ರ ಕ್ಷೇತ್ರ ತಿರುಮಲಕ್ಕೆ ತೆರಳುವ ನಡಿಗೆ ಮಾರ್ಗ ಬಂದ್ ಆಗಿದೆ. ತಿರುಮಲದ ಶ್ರೀವಾರಿ ಮೆಟ್ಟು ಪ್ರದೇಶದಲ್ಲಿದ್ದ ಬೃಹತ್ ಬಂಡೆಯ ಕೆಳಗಿದ್ದ ಮಣ್ಣು ಮಳೆಯಿಂದಾಗಿ ಸಡಿಲಗೊಂಡ ಪರಿಣಾಮ ಬಂಡೆ ಕೆಳಕ್ಕೆ ಉರುಳಿದೆ. ಹೀಗಾಗಿ ತಿರುಪತಿಯಿಂದ ತಿರುಮಲಕ್ಕೆ ತೆರಳುವ ನಡಿಗೆ ದಾರಿ ಬಂದ್ ಆಗಿದೆ. ತಿರುಪತಿಯ ಅಲಿಪಿರಿಯಿಂದ ತಿರುಮಲಕ್ಕೆ ಸಾಗುವ ದಾರಿ ಬಂದ್ ಆದ ಪರಿಣಾಮ ಭಕ್ತರು ಪರದಾಡುವಂತಾಗಿದೆ.