ಲಖನೌ: ಅಮೆರಿಕ, ರಷ್ಯಾ ಹಾಗೂ ಇನ್ನಿತರೆ ದೇಶಗಳ ಜಾಗತಿಕ ಮಹಾಶಕ್ತಿಯ ಪ್ರತಿಫಲವೇ ಪ್ಯಾರೀಸ್ ದಾಳಿ ಎಂದು ಉತ್ತರ ಪ್ರದೇಶ ಸಚಿವ ಅಜಂ ಖಾನ್ ಅವರು ಸೋಮವಾರ ಹೇಳಿದ್ದಾರೆ.
ಪ್ಯಾರೀಸ್ ದಾಳಿ ಕುರಿತಂತೆ ಉತ್ತರ ಪ್ರದೇಶದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಅವರು, ಪ್ಯಾರೀಸ್ ಉಗ್ರ ದಾಳಿಯನ್ನು ನಾವು ಖಂಡಿಸುತ್ತೇವೆ. ಅಲ್ಲದೆ, ತೈಲ ದೇಶಗಳಾದ ಅಮೆರಿಕ ಹಾಗೂ ರಷ್ಯಾ ದೇಶಗಳನ್ನು ಖಂಡಿಸುತ್ತೇವೆ. ಜಾಗತಿಕ ಮಹಾಶಕ್ತಿ ಹೊಂದಿರುವ ದೇಶಗಳೆಂಬ ಖ್ಯಾತಿಗೆ ಪಾತ್ರವಾಗಿರುವ ಈ ಎರಡು ದೇಶಗಳಿಂದ ಇಂದು ಇರಾಕ್, ಅಫ್ಘಾನಿಸ್ತಾನ, ಲಿಬಿಯಾ, ಸಿರಿಯಾ ಹಾಗೂ ಇರಾನ್ ದೇಶಗಳ ಮೇಲೆ ದಾಳಿ ನಡೆದು ಆ ದೇಶಗಳು ನಾಶ ಹೊಂದುತ್ತಿವೆ ಎಂದು ಹೇಳಿದ್ದಾರೆ.
ಮೊದಲು ಯಾರು ಯಾರನ್ನು ಕೊಂದರು ಎಂಬುದರ ಕುರಿತಂತೆ ನಾವು ಮೊದಲು ಚಿಂತನೆ ನಡೆಸಬೇಕಿದೆ. ನಂತರ ಪ್ರತೀಕಾರ ತೀರಿಸಿಕೊಳ್ಳುತ್ತಿರುವವರ ಬಗ್ಗೆ ಚಿಂತನೆ ಮಾಡಬೇಕು. ಯಾರು ಯಾರನ್ನೇ ಕೊಂದರೂ ಬಲಿಯಾಗುವುದು ಅಮಾಯಕರು. ದಾಳಿ ಯಾರೇ ಮಾಡಿದರೂ ಅದು ನಿಜಕ್ಕೂ ತಪ್ಪು. ನಿಜವಾದ ಉಗ್ರರು ಯಾರು ಹಾಗೂ ಯಾರು ಉಗ್ರರಲ್ಲ ಎಂಬುದನ್ನುಇತಿಹಾಸ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ಅಜಂಖಾನ್ ಅವರ ಹೇಳಿಕೆಗೆ ಈಗಾಗಲೇ ಖಂಡನೆ ವ್ಯಕ್ತವಾಗುತ್ತಿದ್ದು, ಹೇಳಿಕೆ ಕುರಿತಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕ್ಷಮಾಪಣೆ ಕೇಳಬೇಕೆಂದು ಬಿಜೆಪಿ ನಾಯಕ ಸಿದ್ಧಾರ್ಥ ನಾಥ್ ಸಿಂಗ್ ಅವರು ಆಗ್ರಹಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಅಜಂಖಾನ್ ಒಬ್ಬರು ಜವಾಬ್ದಾರಿಯುತ ನಾಯಕರಾಗಿದ್ದು, ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ಪಿ.ಎಲ್. ಪುಣ್ಯಾ ಮಾತನಾಡಿ, ಭಯೋತ್ಪಾದನೆಯನ್ನು ಖಂಡಿಸಬೇಕು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಜನರನ್ನು ಖಂಡಿಸಬೇಕು ಎಂದು ಹೇಳಿದ್ದಾರೆ.