ನವದೆಹಲಿ: ಎನ್‌ಡಿಎ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದು ಹಾಕುತ್ತಾರೆ ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ಇರುವುದಿಲ್ಲ ಎಂದು ಮತದಾರರನ್ನು ನಂಬಿಸುವಲ್ಲಿ ಪ್ರತಿ ಪಕ್ಷಗಳು ಯಶಸ್ವಿಯಾಗಿದ್ದೇ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಗುರುವಾರ ಹೇಳಿದ್ದಾರೆ.
ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಸ್ವಾನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಒಬಿಸಿ ವರ್ಗದ ಹಲವಾರು ಜಾತಿಗಳನ್ನು ಅತಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಂಡಿದ್ದು ಕೂಡ ಮಹಾಮೈತ್ರಿಕೂಟದ ಪರವಾಗಿ ಮತಗಳು ಹೆಚ್ಚಲು ಕಾರಣವಾಯಿತು ಎಂದರು.
ಇನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮೀಸಲಾತಿ ಪುನರ್ ವಿಮರ್ಶೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸದ ಎಲ್‌ಜೆಪಿ ಮುಖ್ಯಸ್ಥರಾಗಿರುವ ಪಾಸ್ವಾನ್, ನಾನು ಹಾಗೆ ಭಾವಿಸುವುದಿಲ್ಲ; ಏಕೆಂದರೆ ಎನ್‌ಡಿಎ ಸೋಲಿಗೆ ಅದೊಂದೇ ಕಾರಣವಲ್ಲ; ಆದರೆ ಭಾಗವತ್ ಅವರ ಆ ಹೇಳಿಕೆಯನ್ನೇ ಪ್ರತಿಪಕ್ಷಗಳು ದೊಡ್ಡದು ಮಾಡಿ ಮತದಾರರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದರು ಎಂದರು.
ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ ಮೀಸಲಾತಿ ಹೋಗಿಬಿಡುತ್ತೆ; ಅಲ್ಪಸಂಖ್ಯಾಕರು ಅಸುರಕ್ಷಿತರಾಗುತ್ತಾರೆ ಎಂಬ ಭಯವನ್ನು ಅವರು ಜನರಲ್ಲಿ ಸೃಷ್ಟಿಸಿ ರಾಜಕೀಯ ಲಾಭವನ್ನು ಹೊಡೆದುಕೊಂಡರು ಎಂದು ಪಾಸ್ವಾನ್ ದೂರಿದರು.
ದಾದ್ರಿ ಹತ್ಯೆಯು ಉತ್ತರ ಪ್ರದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯಕ್ಕೆ ಸಂಬಂಧಪಟ್ಟದ್ದಾಗಿತ್ತು ಮತ್ತು ಅದರ ಹೊಣೆಗಾರಿಕೆ ಪೂರ್ತಿಯಾಗಿ ಅಲ್ಲಿನ ಸಮಾಜವಾದಿ ಪಕ್ಷದ ಮೇಲಿತ್ತು. ಆದರೆ ಅದನ್ನು ತಮ್ಮ ಪರವಾಗಿ ತಿರುಗಿಸಿಕೊಂಡ ಮಹಾಮೈತ್ರಿಕೂಟದ ಪಕ್ಷಗಳು, ಎನ್‌ಡಿಎ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇರುವುದಿಲ್ಲ ಎಂದು ಹೇಳಿ ಭಯ ಹುಟ್ಟಿಸಿದರು ಎಂದರು.