ನವದೆಹಲಿ: ಬಹುಕೋಟಿ ಹಗರಣ ವ್ಯಾಪಂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರಿಗೆ ಶುಕ್ರವಾರ ನೋಟಿಸ್ ಜಾರಿದೆ ಮಾಡಿದೆ.
ಹಲವು ರಾಜಕಾರಣಿಗಳು, ಹಿರಿಯ ಅಧಿಕಾರಿಗಳು, ಉದ್ಯಮಿಗಳು ಭಾಗಿಯಾಗಿದ್ದಾರೆನ್ನಲಾದ ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ (ಎಂಪಿಪಿಇಬಿ) ಹಗರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದ್ದು, ಅರ್ಜಿಯಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ರಾಜ್ಯಪಾಲರು ತಮ್ಮ ಹುದ್ದೆಯಲ್ಲಿ ಮುಂದುವರೆಯಬೇಕೆ ಇಲ್ಲವೆ ಎಂಬುದರ ಕುರಿತಂತೆ ಮಾರ್ಗಸೂಚಿಯೊಂದನ್ನು ರೂಪಿಸುವಂತೆ ಕೇಳಲಾಗಿದೆ.
ಅರ್ಜಿ ಸಂಬಂಧ ಇದೀಗ ಸುಪ್ರೀಂಕೋರ್ಟ್ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಈ ಕುರಿತಂತೆ 3 ವಾರಗಳೊಳಗಾಗಿ ಉತ್ತರಿಸುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.
2012ರಲ್ಲಿ ಅರಣ್ಯ ರಕ್ಷಕರ ಹುದ್ದೆ ನೇಮಕ ಪ್ರಕ್ರಿಯೆಗೆ ಸಂಬಂಧಿಸಿ ರಾಜ್ಯಪಾಲರು ಐವರ ಹೆಸರು ಶಿಫಾರಸು ಮಾಡಿದ್ದರು. ಈ ಮೂವರು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ ನೋಡಿಕೊಳ್ಳಬೇಕೆಂದು ಎಂಪಿಪಿಇಬಿ ಪರೀಕ್ಷೆ ಅಕ್ರಮದಲ್ಲಿ ತೊಡಗಿದ್ದವರಿಗೆ ಸೂಚಿಸಿದ್ದರು. ಈ ಕುರಿತ ಶಿಫಾರಸಿಗಾಗಿ ಅವರು ತಮ್ಮ ಅಧಿಕೃತ ಲೆಟರ್ ಹೆಡ್ ಅನ್ನೇ ಬಳಸಿದ್ದರು. ಈ ಹಗರಣ ಫೆ.20ರಂದು ಮಧ್ಯಪ್ರದೇಶ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬಂದಿತ್ತು.
ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಎಸ್ಟಿಎಫ್ ಸ್ವತಂತ್ರ ಎಂದು ಕೋರ್ಟ್ ಹೇಳಿತ್ತು. ವ್ಯಾಪಂ ಹಗರಣ ಸಂಬಂಧ ಹಲವು ನಿಗೂಢ ಸಾವು ಪ್ರಕರಣಗಳು ಬೆಳಕಿಗೆ ಬಂದಿತ್ತು. ನಿಗೂಢ ಸಾವು ಪ್ರಕರಣಗಳ ಸಾಲಿನಲ್ಲಿ ರಾಮ್ ನರೇಶ್ ಯಾದವ್ ಅವರ ಪುತ್ರ ಶೈಲೇಶ್ ಕೂಡ ಸೇರಿದ್ದು, ಮಾ.25ರಂದು ನಿಗೂಢವಾಗಿ ಸಾವನ್ನಪ್ಪಿದ್ದರು.