ದೇಶ

ವಿಕಲಚೇತನರಿಗೆ 2ನೇ, 3ನೇ ಅಂತಸ್ತಿನಲ್ಲಿ ಪರೀಕ್ಷೆ ನಡೆಸಿದ ರೈಲ್ವೆ

Srinivasamurthy VN

ನವದೆಹಲಿ: ವಿಕಲಚೇತನರ ರೈಲ್ವೇ ನೇಮಕಾತಿಗಾಗಿ ನಡೆದ ಪರೀಕ್ಷೆಗಳನ್ನು 2ನೇ ಮತ್ತು 3ನೇ ಅಂತಸ್ತುಗಳಲ್ಲಿ ನಡೆಸುವ ಮೂಲಕ ಇಲಾಖೆ ತನ್ನ ಮೂರ್ಖತನ ಪ್ರದರ್ಶಿಸಿ ಸಾರ್ವಜನಿಕರ  ಆಕ್ರೋಶಕ್ಕೆ ಒಳಗಾಗಿದೆ.

ಗುರುವಾರ ವಿಕಲಚೇತನರಿಗಾಗಿ ನಡೆದ ಪ್ರತ್ಯೇಕ ಪರೀಕ್ಷೆಯನ್ನು ಕಷ್ಟಗಳ ನಡುವೆಯೇ ಮೆಟ್ಟಿಲುಗಳನ್ನೇರಿ ಬಂದು ಬರೆಯುವ ಸಂಕಷ್ಟವನ್ನು ಅಭ್ಯರ್ಥಿಗಳು ಅನುಭವಿಸಿದರು. ಆ ಬೃಹತ್  ಕಟ್ಟಡದಲ್ಲಿ ಲಿಫ್ಟ್, ರ್ಯಾಂಪ್ ಇರಲಿಲ್ಲ ಎಂದು `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. 450ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ತುಂಬಿಸಬೇಕೆಂದು ಸುಪ್ರೀಂ ಆದೇಶ ನೀಡಿರುವ  ಹಿನ್ನಲೆಯಲ್ಲಿ ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷೆ ನಡೆಸಲು ಮುಂದಾಗಿತ್ತು. ಹಲವು ಅಭ್ಯರ್ಥಿಗಳು ಮೆಟ್ಟಿಲು ಹತ್ತಲಾಗದೇ ಮೆಟ್ಟಿಲಲ್ಲೇ ಕುಸಿದಿದ್ದು, ಇನ್ನು ಕೆಲವರನ್ನು ಅವರ ಪೋಷಕರೇ  ಹೊತ್ತೊಯ್ದು ಪರೀಕ್ಷಾ ಕೊಠಡಿಯಲ್ಲಿ ಕೂರಿಸಿದರು. ಇನ್ನು ಕೆಲವು ಅಸಹಾಯಕ ವಿಕಲ ಚೇತನರು ಕಣ್ಣೀರಿಡುತ್ತಿದ್ದ ದೃಶ್ಯಗಳು ಕಂಡುಬಂದಿದ್ದಾಗಿ ಪರೀಕ್ಷೆ ಬರೆದ ಅಭ್ಯರ್ಥಿಯೊಬ್ಬರು ತಿಳಿಸಿದ್ಧಾರೆ.

ಬೆಂಗಳೂರು ಸೇರಿದಂತೆ ಪರೀಕ್ಷೆ ನಡೆದ 142 ಕೇಂದ್ರಗಳ ಪೈಕಿ 10 ಕೇಂದ್ರಗಳಲ್ಲಿ ಈ ರೀತಿಯ ಸಮಸ್ಯೆ ಆಗಿರುವುದು ಹೌದು ಎಂದು ರೈಲ್ವೇ ಅಧಿಕಾರಿಗಳು ಒಪ್ಪಿಕೊಂಡಿದ್ಧಾರೆ. ಈ ತೊಂದರೆ  ಅನುಭವಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಇನ್ನೊಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ಧಾರೆ. ಘಟನೆಯಿಂದ ರೈಲ್ವೇ ಸಚಿವ ಸುರೇಶ್ ಪ್ರಭ ತೀವ್ರ  ಮುಜುಗರಕ್ಕೊಳಗಾಗಿ ತಕ್ಷಣವೇ ತನಿಖೆಗೆ ಆದೇಶಿಸಿದರು.

SCROLL FOR NEXT