ದೇಶ

ಮಳೆಗೆ ಚೆನ್ನೈ ತತ್ತರ: ಕೇವಲ ಒಂದು ಗಂಟೆಯಲ್ಲೇ 50 ಮಿ.ಮೀ ದಾಖಲೆ ಮಳೆ

Srinivasamurthy VN

ಚೆನ್ನೈ: ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಕಳೆದ 15 ದಿನಗಳಿಂದು ಸುರಿಯುತ್ತಿರುವ ಮಳೆ ಕೊಂಚ ಬಿಡುವಿನ ಬಳಿಕ ಮತ್ತೆ ತನ್ನ ಅಬ್ಬರವನ್ನು ಮುಂದುವರೆಸಿದ್ದು, ಸೋಮವಾರ ಸಂಜೆ ಕೇವಲ ಒಂದೇ ಗಂಟೆಯಲ್ಲಿ ಸುಮಾರು 50 ಮಿ.ಮೀ ಮಳೆಯಾಗಿದೆ.

ನಿನ್ನೆ ಸಂಜೆ ಸುಮಾರು 4.30ರಿಂದ 5.30 ರ ವೇಳೆಯಲ್ಲಿ 50 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಯಿಂದಾಗಿ ಚೆನ್ನೈ ನಗರ ಸ್ಥಬ್ದವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಮಂಡಿಯವರೆಗೂ ನೀರು ನಿಂತಿದ್ದು, ವಾಹನಗಳ ಸಂಚಾರ ಅಸ್ತವ್ಯಸ್ಥಗೊಂಡಿದೆ.

ನಗರದ ಪ್ರಮುಖ ಪ್ರದೇಶಗಳು ಜಾಲಾವೃತ್ತಗೊಂಡಿದ್ದು, ಕೊಯಂಬೇಡು, ನಂಗನಲ್ಲೂರು, ಆರ್ ಎ ಪುರಂ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಮಿಳುನಾಡಿನಲ್ಲಿನ ಮಳೆ ಪ್ರಭಾವ ಕರ್ನಾಟಕದ ಮೇಲೂ ಆಗಿದೆ. ದಕ್ಷಿಣ ಒಳನಾಡಿನಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿದೆ. ತಮಿಳುನಾಡಿನ ನೈರುತ್ಯ ಕರಾವಳಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಭಾರಿ ಮಳೆ ಸುರಿಯುತ್ತಿದೆ.

ಚೆನ್ನೈ ನಗರದಲ್ಲಿ 2005ರಲ್ಲಿ ಭೀಕರ ನೆರೆ ಕಾಣಿಸಿಕೊಂಡಿತ್ತು. ಆ ಬಳಿಕ ನಗರ ಈ ರೀತಿ ಜಲಾವೃತವಾಗಿರುವುದು ಇದೇ ಮೊದಲು.

SCROLL FOR NEXT