ಅರಂಬಾಘ್: ರಾಜ್ಯಗಳಿಗೆ ಪ್ರವಾಹ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಆರೋಪಿಸಿದ್ದಾರೆ.
ಪ್ರವಾಹ ಪರಿಹಾರ ಅಂದಾಜು ಮಾಡಲು ಕೇಂದ್ರದ ಉನ್ನತ ತಂಡ ಆಗಮಿಸಿದ ನಂತರವೂ ರಾಜ್ಯಕ್ಕೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಎಂಟು ತಿಂಗಳ ಸಮಯ ತೆಗೆದುಕೊಂಡಿತು. ಆದರೆ ತಮಿಳುನಾಡಿಗೆ ಕೇವಲ 7 ದಿನಗಳಲ್ಲಿ ಪರಿಹಾರ ನೀಡಲಾಯಿತು ಎಂದು ಮಮತಾ ಅಸಮಾಧಾನ ವ್ಯಕ್ತಪಡಿಸಿದರು.
ಹೂಗ್ಲಿ ಜಿಲ್ಲೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಮತಾ, 'ನಿಮಗೆ ತಮಿಳುನಾಡು ತುಂಬಾ ಆಪ್ತ, ಪಶ್ಚಿಮ ಬಂಗಾಳ ಅಲ್ಲವೇ? ಎಂದು ಪ್ರಶ್ನಿಸಿದರು. ಅಲ್ಲದೆ ಕೇಂದ್ರ ಸರ್ಕಾರ ರಾಜಕೀಯ ಬಿಟ್ಟು ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು' ಎಂದರು.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯ ನಡುವೆಯೂ ರಾಜ್ಯ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದರು.