ನವದೆಹಲಿ: ಅಸಹಿಷ್ಣುತೆ ಕುರಿತಂತೆ ಬಾಲಿವುಡ್ ನಟ ಅಮಿರ್ ಖಾನ್ ನೀಡಿದ್ದ ಹೇಳಿಕೆಗೆ ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬೆಂಬಲ ಸೂಚಿಸಿದ್ದು, ಪ್ರಶ್ನಿಸುವವರನ್ನು ನಿಂದನೆ ಮಾಡುವುದು ಹಾಗೂ ಬೆದರಿಕೆ ಹಾಕುವುದು ಸರಿಯಲ್ಲಿ ಎಂದು ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರಶ್ನೆ ಮಾಡುವವನ್ನು ದೇಶ ಪ್ರೇಮವಿಲ್ಲದವರು, ದೇಶವಿರೋಧಿಗಳು ಹಾಗೂ ಪ್ರೇರಿತಗೊಂಡಿರುವ ವ್ಯಕ್ತಿಗಳು ಎಂದು ಹೇಳುವ ಬದಲು ಸರ್ಕಾರ ಜನರನ್ನು ಅರ್ಥ ಮಾಡಿಕೊಳ್ಳುವ ಕಾರ್ಯಗಳನ್ನು ಮಾಡಬೇಕಿದೆ. ಜನರಿಗೆ ಯಾವುದರಿಂದ ತೊಂದರೆ ಅನುಭವಿಸುತ್ತಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ದಾರಿಯಿಂದ ಮಾತ್ರ ಭಾರತದಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ. ಅದನ್ನು ಬಿಟ್ಟು ಸರ್ಕಾರ ಹಾಗೂ ಮೋದಿಯವರನ್ನು ಪ್ರಶ್ನೆ ಮಾಡುವವರಿಗೆ ಬೆದರಿಕೆ ಹಾಕಿ ನಿಂದನೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದರಂತೆ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಅವರು ಮಾತನಾಡಿದ್ದು, ಅಮಿರ್ ಖಾನ್ ಒಬ್ಬ ಗೌರವಾನ್ವಿತ ನಟರಾಗಿದ್ದು, ಇದೀಗ ಅವರು ನೀಡಿರುವ ಹೇಳಿಕೆ ಇಡೀ ದೇಶದ ಜನರು ನೋಡುತ್ತಿರುವಂತಹದ್ದಾಗಿದೆ. ಇದೇ ರೀತಿಯ ಹೇಳಿಕೆಯನ್ನು ಇದೀಗ ಇಡೀ ಭಾರತದಾದ್ಯಂತ ಹೇಳಲಾಗುತ್ತಿದೆ. ಒಳ್ಳೆಯ ಆಲೋಚನೆಯುಳ್ಳಂತಹ ವ್ಯಕ್ತಿಗಳು ಈ ರೀತಿಯಾಗಿ ಮಾತನಾಡುತ್ತಾರೆಂದು ಹೇಳಿದ್ದಾರೆ.
ನಿನ್ನೆ ನವದೆಹಲಿಯಲ್ಲಿ ನಡೆದ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಾಲಿವುಡ್ ನಟ ಆಮಿರ್ ಖಾನ್ ಅವರು, ತಾವು ಪತ್ನಿ ಕಿರಣ್ ರಾವ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ತಾವು ಭಾರತ ದೇಶವನ್ನು ತೊರೆಯಬಾರದೇಕೆ ಎಂದು ಪ್ರಶ್ನಿಸಿದ್ದರು. ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಅಸುರಕ್ಷತೆಯ ಆತಂಕ ಕಾಡುತ್ತಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದರು. ತಮ್ಮ ಮಕ್ಕಳ ಭದ್ರತೆಯ ದೃಷ್ಟಿಯಿಂದ ತಾವು ವಿದೇಶದಲ್ಲಿ ನೆಲೆಸಬಾರದೇಕೆ ಎಂದು ಹೇಳಿದ್ದರು. ಈ ಹೇಳಿಕೆಗೆ ಇದೀಗ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರದ ಎನ್ ಡಿಎ ಸರ್ಕಾರ ಅಮಿರ್ ಖಾನ್ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದೆ.