ದೇಶ

ಜಮಿಯಾ ವಿವಿ ಘಟಿಕೋತ್ಸವಕ್ಕೆ ಮೋದಿಗೆ ಆಹ್ವಾನ, ಪ್ರತಿಕ್ರಿಯಿಸದ ಪ್ರಧಾನಿ

Lingaraj Badiger

ನವದೆಹಲಿ: ಜಮಿಯಾ ಮಿಲಿಯಾ ಇಸ್ಲಾಮಿಯಾ(ರಾಷ್ಟ್ರೀಯ ಮುಸ್ಲಿಂ ವಿಶ್ವವಿದ್ಯಾಲಯ) ವಿಶ್ವವಿದ್ಯಾಲಯ ಈ ಬಾರಿ ತನ್ನ ಘಟಿಕೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದೆ. ಆದರೆ ಇದುವರೆಗೂ ಪ್ರಧಾನಿ ಕಚೇರಿಯಿಂದ ವಿವಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

'ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ನಮ್ಮ ವಿವಿಯ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತೆ ನಾವು ಈ ತಿಂಗಳ ಆರಂಭದಲ್ಲಿ ಪ್ರಧಾನಿಗೆ ಆಹ್ವಾನ ನೀಡಿದ್ದೇವೆ. ಆದರೆ ಪ್ರಧಾನಿ ಕಚೇರಿಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ' ಎಂದು ವಿವಿ ವಕ್ತಾರ ಮುಕೇಶ್ ರಂಜನ್ ಅವರು ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ವಿವಿ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 1920ರಲ್ಲಿ ಸ್ಥಾಪನೆಯಾದ ಈ ವಿವಿ 1988ರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಿತು.

ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ಯಾವುದೇ ವಿವಿಗೆ ಭೇಟಿ ನೀಡಿಲ್ಲ. ಅಲ್ಲದೆ 2008ರಲ್ಲಿ ಇದೇ ವಿವಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಜಾಮಿಯಾ ವಿವಿ ಆಹ್ವಾನ ಮಹತ್ವ ಪಡೆದುಕೊಂಡಿದೆ.

ಪ್ರಧಾನಿಯಾಗುವ ಮುನ್ನ ಗುಜರಾತ್‌ನಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, 'ದೆಹಲಿಯಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಎಂದು ಕರೆಯುವ ಒಂದು ವಿವಿ ಇದೆ. ಭಯೋತ್ಪಾದನೆಯಲ್ಲಿ ಭಾಗಯಾಗಿರುವವರಿಗೆ ಕಾನೂನು ನೆರವು ನೀಡುವುದಾಗಿ ಸಾರ್ವಜನಿಕವಾಗಿಯೇ ಘೋಷಿಸಿದೆ. ಸರ್ಕಾರದ ಹಣದಲ್ಲಿ ನಡೆಯುತ್ತಿರುವ ಈ ವಿವಿ ಉಗ್ರರು ಜೈಲಿನಿಂದ ಹೊರಬರಲು ಹಣ ಖರ್ಚು ಮಾಡುವುದಾಗಿ ಹೇಳುತ್ತಿದೆ. ಈ ಮತ ಬ್ಯಾಂಕ್ ರಾಜಕಾರಣಕ್ಕೆ ಕೊನೆ ಯಾವಾಗ?' ಎಂದು ಪ್ರಶ್ನಿಸಿದ್ದರು.

ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ವಿವಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದಾಗ, ಜಾಮಿಯಾ ವಿವಿ ಕುಲಪತಿ ಮುಶ್ರಿರುಲ್ ಹಸನ್ ಅವರು ಬಂಧಿತ ವಿದ್ಯಾರ್ಥಿಗಳಿಗೆ ವಿವಿ ಕಾನೂನು ನೆರವು ನೀಡಲಿದೆ ಎಂದಿದ್ದರು.

SCROLL FOR NEXT