ದೇಶ

ಪ್ರಶಸ್ತಿ ವಾಪಸಿಗೊಂದು ಪಾಲಿಸಿ?

Mainashree
ನವದೆಹಲಿ: ದೇಶದಲ್ಲಿನ ಅಸಹಿಷ್ಣುತೆಗಾಗಿ ಲೇಖಕರಿಂದ ಪ್ರಶಸ್ತಿ ವಾಪಸು ಚಳವಳಿಯ ಬಿಸಿ ಎದುರಿಸುತ್ತಿರುವ ಸಾಹಿತ್ಯ ಅಕಾಡೆಮಿ, ಡಿ.17ರಂದು ನಡೆಯಲಿರುವ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ವಿಚಾರವನ್ನು ಎತ್ತಿಕೊಳ್ಳಲಿದೆ. ಭವಿಷ್ಯದಲ್ಲಿ ಪ್ರಶಸ್ತಿ ಮರಳಿಸುವವರಿಗಾಗಿ ನೀತಿಯೊಂದನ್ನು ರೂಪಿಸುವ ಕುರಿತು ಕೂಡ ಚರ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 
ನಮ್ಮ ಕಾರ್ಯಕಾರಿ ಸಭೆಯಲ್ಲಿ, ಪ್ರಶಸ್ತಿ ವಾಪಸಿ ಕುರಿತು ನಮ್ಮ ಸದಸ್ಯರೇನು ಮಾಡಬಹುದು ಎಂಬುದನ್ನು ಚರ್ಚಿಸಲಿದ್ದೇವೆ. ಹೀಗೆ ಪ್ರಶಸ್ತಿಗಳನ್ನು ಮರಳಿಸಬಹುದೇ, ಮರಳಿಸುವುದಾದರೆ ಅದರ ಕುರಿತು ಲಿಖಿತ ನಿಯಮಗಳನ್ನು ರಚಿಸಬಹುದೇ ಎಂಬುದರ ಕುರಿತೂ ಚರ್ಚಿಸಲಾಗುವುದು ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಶ್ವನಾಥ ಪ್ರಸಾದ್ ತಿವಾರಿ ಹೇಳಿದ್ದಾರೆ. 
ಪ್ರಶಸ್ತಿಯನ್ನೇನೋ ಸುಲಭವಾಗಿ ಮರಳಿಸಬಹುದು. ಆದರೆ ಅದರಿಂದ ಗಳಿಸಿದ ಘನತೆಯನ್ನು ಮರಳಿಸಬಹುದೇ? ಮುಂದೆಯೂ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಅಕಾಡೆಮಿ ಅವರ ಹೆಸರನ್ನು ಪ್ರದರ್ಶಿಸಬಹುದೇ? ಎಂಬಿತ್ಯಾದಿ ವಿಚಾರಗಳು ಚರ್ಚೆಯಾಗಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಪ್ರಶಸ್ತಿ ಹಾಗೂ ಪ್ರಶಸ್ತಿ ಹಣವನ್ನು ಮರಳಿಸುವ ಬಗ್ಗೆ ಯಾವುದೇ ಲಿಖಿತ ನಿಯಮವಿಲ್ಲ.
SCROLL FOR NEXT