ನವದೆಹಲಿ: ಸದ್ದಿಲ್ಲದೇ ಮನುಷ್ಯನ ದೇಹ ಪ್ರವೇಶಿಸುತ್ತಿರುವ ಆರ್ಸೆನಿಕ್ ವಿಷದಿಂದಾಗಿ ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳ ಜನ ಸಾವಿಗೀಡುಗುತ್ತಿದ್ದಾರೆ. !
ಈ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳ ಸಮಿತಿ ನೀಡಿದೆ. 1 ಲಕ್ಷ ಮಂದಿ ಸತ್ತಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ `ಹಿಂದುಸ್ತಾನ್ ಟೈಮ್ಸ್' ಪತ್ರಿಕೆ ವರದಿ ಪ್ರಕಟಿಸಿದ್ದು, ಕರ್ನಾಟಕ, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶ, ಬಿಹಾರ, ಅಸ್ಸಾಂ, ಮಣಿಪುರ, ಜಾರ್ಖಂಡ್, ಪಶ್ಚಿಮಬಂಗಾಳ, ಛತ್ತೀಸ್‍ಗಡ ಆಂಧ್ರ ಪ್ರದೇಶ ಜನ ಹೆಚ್ಚಾಗಿ ಆರ್ಸೆನಿಕ್ ವಿಷ ಜಾಲಕ್ಕೆ ತುತ್ತಾಗಿದ್ದಾರೆ.
ಕೃಷಿಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಈ ವಿಷ, ತರಕಾರಿ ಸೇರಿದಂತೆ ವಿವಿಧ ಉತ್ಪನ್ನಗಳ ಮೂಲಕ ಮಾನವನ ದೇಹ ಸೇರುತ್ತಿದೆ. ಈ 12 ರಾಜ್ಯಗಳ 7 ಕೋಟಿ ಮಂದಿ ಈ ವಿಷದ ಪರಿಣಾಮದಿಂದ ಅಡ್ಡಪರಿಣಾಮ ಎದುರಿಸುತ್ತಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಮಂದಿಗೆ ಇದು ಒಂದಷ್ಟು ಹೆಚ್ಚಾಗಿಯೇ ಕಾಡುತ್ತಿದೆ. ವಿಚಿತ್ರವೆಂದರೆ, ಈ ವಿಷಕ್ಕೆ ತುತ್ತಾಗಿರುವವರ ಪೈಕಿ ಬಡವರೇ ಹೆಚ್ಚಿದ್ದು, ಚಿಕಿತ್ಸೆ ಪಡೆಯುವ ಶಕ್ತಿಯೂ ಇಲ್ಲದವರಾಗಿದ್ದಾರೆ. ಅಲ್ಲದೆ ಈ ಸಮಸ್ಯೆ ನಿವಾರಣೆಗಾಗಿ ಸುಮಾರು ರು.9700 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಹರಡುತ್ತಿರುವ ವಿಷ
ದೇಶದ 96 ಜಿಲ್ಲೆಗಳ ನೆಲ, ಜಲ ಈ ಆರ್ಸೆನಿಕ್‍ನಿಂದ ಕಲುಷಿತಗೊಂಡಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್)ನ ವರದಿಯಂತೆ, ಸಂತ್ರಸ್ತ ರಾಜ್ಯಗಳಲ್ಲಿ ಶೇ.90 ರಷ್ಟು ಆರ್ಸೆನಿಕ್‍ಪೂರಿತ ನೀರನ್ನು ಬಳಕೆ ಮಾಡಲಾಗುತ್ತಿದೆ. ಹೀಗಾಗಿಯೇ ಈ ಪ್ರಮಾಣ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ.
ತರಕಾರಿಯಲ್ಲೇ ಹೆಚ್ಚು
ದೊಡ್ಡ ಪ್ರಮಾಣದ ಆರ್ಸೆನಿಕ್ ವಿಷ ಆಲೂಗಡ್ಡೆ, ಮೂಲಂಗಿ, ಬದನೆ, ಬೆಂಡೆ, ಹೂಕೋಸು ಹಾಗೂ ಹಲವಾರು ಅಲಂಕಾರಿಕ ಹೂಗಿಡಗಳಲ್ಲಿ ಪತ್ತೆಯಾಗಿದೆ. ಕೊಂಚ ಸಹನೀಯ ಪ್ರಮಾಣದಲ್ಲಿ ಬೇಳೆಕಾಳುಗಳು, ಹಸಿಮೆಣಸಿನಕಾಯಿ, ಟೊಮೆಟೊ, ಹಾಗಲ ಮತ್ತು ಅರಿಷಿಣದಲ್ಲೂ ಕಂಡುಬಂದಿದೆ. ಉಳಿದಂತೆ, ಎಣ್ಣೆಕಾಳುಗಳು, ಅಧಿಕ ಇಳುವರಿಯ ಬತ್ತದ ಫಸಲಿನಲ್ಲಿ ಅತ್ಯಧಿಕ ಪ್ರಮಾಣದ ಆರ್ಸೆನಿಕ್ ಪತ್ತೆಯಾಗಿದೆ.
ಆರ್ಸೆನಿಕ್ ದೇಹ ಸೇರಿದರೆ ಏನಾಗುತ್ತದೆ?:ಆರ್ಸೆನಿಕ್ ಅಂಶ ಕ್ಯಾನ್ಸರ್ ಹಾಗೂ ಹೃದಯದ ತೊಂದರೆಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ, ಸಮಸ್ಯೆ ನಿವಾರಣೆಗೆ ರಾಷ್ಟ್ರೀಯ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಬೇಕೆಂದು ಸರ್ಕಾರಕ್ಕೆ ಸಮಿತಿ ಸಲಹೆ ಮಾಡಿದೆ. ರಾಷ್ಟ್ರೀಯ ಕಾರ್ಯಪಡೆ ರಚನೆ ಹಾಗೂ ದೊಡ್ಡ ಮೊತ್ತದ ಅನುದಾನವನ್ನು ಈ ಉದ್ದೇಶಕ್ಕೆ ಮೀಸಲಿಡುವಂತೆಯೂ ಸಮಿತಿ ಶಿಫಾರಸು ಮಾಡಿದೆ.