ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು, ಡಿಸೆಂಬರ್ ಮೊದಲನೇ ವಾರದಲ್ಲಿ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ. ಇದೇ ಮಾದರಿಯಲ್ಲಿ ವೀರಭದ್ರ ಸಿಂಗ್ ಅವರೊಂದಿಗೆ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಇತರರ ಆರೋಪಿಗಳಿಗೂ ಸಮನ್ಸ್ ಜಾರಿ ಮಾಡಲಾಗಿದೆ.
ಸಿಬಿಐ ಸಲ್ಲಿಸಿರುವ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ವೀರಭದ್ರ ಸಿಂಗ್ ಅವರಿಂದ ಅಕ್ರಮ ಹಣ ವರ್ಗಾವಣೆಯಾಗಿರುವ ಬಗ್ಗೆ ತನಿಖಾಧಿಕಾರಿಗಳು ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದಾರೆ. ದೂರಿಗೆ ಸಂಬಂಧಿಸಿದಂತೆ ನವದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ ತಂಡ ಶೋಧ ಕಾರ್ಯ ನಡೆಸಿದೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹಾಗೂ 2009 -11 ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿರುವ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.