ಜೊಹಾನ್ಸ್ ಬರ್ಗ್: ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಅಹ್ಮದ್ ಕಥ್ರಡಾ ಅವರು ಗುರುವಾರ ಫ್ರೀಡಂ ಆಫ್ ದ ಸಿಟಿ ಆಫ್ ಕೇಪ್ ಟೌನ್ ಪ್ರಶಸ್ತಿ ಪಡೆದಿದ್ದಾರೆ.
ಕಥ್ರಡಾ ಅವರು ದಕ್ಷಿಣ ಆಫ್ರಿಕಾದ ಜಾಗತಿಕ ವರ್ಣಭೇದ ಹೋರಾಟಗಾರ ನೆಲ್ಸನ್ ಮಂಡೇಲಾ ಅವರ ಆಪ್ತ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದವರಾಗಿದ್ದು, ಆಫ್ರಿಕಾದ ಪ್ರಾಚೀನ ನಗರದ ಕೇಪ್ ಟೌನ್ ಪ್ರಶಸ್ತಿ ಪಡೆದ ಆರನೇ ವಿಜೇತ ಇವರಾಗಿದ್ದಾರೆ.
ಪ್ರಶಸ್ತಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಥ್ರಡಾ ಅವರು, ಪ್ರಶತ್ರಿಯ ಹಿಂದೆ ಸಾಕಷ್ಟು ಮಹಿಳೆ ಹಾಗೂ ಪುರುಷರ ತ್ಯಾಗ ಹಾಗೂ ಬಲಿದಾನವಿದೆ. ವರ್ಣಭೇದ, ಲಿಂಗ ಭೇದ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅವರ ಜೀವನವನ್ನೇ ಬಲಿ ನೀಡಿದ್ದಾರೆ.
ಸ್ವಾತಂತ್ರ್ಯ ಯಾವ ರೀತಿ ಹಾಗೂ ಇದಕ್ಕಾಗಿ ಪಟ್ಟ ಶ್ರಮವನ್ನು ನಾವು ಕೆಲವೊಮ್ಮೆ ಮರೆತುಹೋಗುತ್ತೇವೆ. ಸ್ವಾತಂತ್ರ್ಯದ ದಿನಗಳಲ್ಲಾದ ಗಾಯ ಅದೆಷ್ಟೋ ಮಂದಿಗೆ ಇನ್ನೂ ವಾಸಿಯಾಗಿಲ್ಲ. ಮುಂದಿನ ಭವಿಷ್ಯಕ್ಕಾಗಿ ನಾವು ನ್ಯಾಯ, ಸಮಾನತೆ ಹಾಗೂ ಗೌರವವನ್ನು ಅಭಿವೃದ್ಧಿ ಪಡಿಸಬೇಕಿದೆ. ಕೇಪ್ ಟೌನ್ ನಲ್ಲಿರುವ ಪ್ರತಿಯೊಬ್ಬರು ಈ ಬಗ್ಗೆ ಚಿಂತನೆ ನಡೆಸಬೇಕಿದೆ. ಇಲ್ಲಿರುವ ಪ್ರತಿಯೊಬ್ಬರು ಸಾಧನೆ ಮಾಡುವತ್ತ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕೇಪ್ ಟೌನ್ ಒಂದು ಸುಂದರ ನಗರವಾಗಿದ್ದು, ಒಂದು ಕಾಲದಲ್ಲಿ ಇದರ ಗುಲಾಮಗಿರಿಯ ಇತಿಹಾಸ, ಸಾಮಾಜಿಕ, ಆರ್ಥಿಕ, ಭೌಗೋಳಿಕ ಮತ್ತು ಮಾನಸಿಕವಾಗಿ ಜನರ ಸ್ಥಳಾಂತರ ಒಂದು ಕತ್ತಲೆಯ ಛಾಯೆಯಾಗಿದೆ ಎಂದು ಅಹ್ಮೆದ್ ಹೇಳಿಕೊಂಡಿದ್ದಾರೆ.