ನವದೆಹಲಿ: ತಲಾಬಿರಾ-2 ಕಲ್ಲಿದ್ದಲು ನಿಕ್ಷೇಪವನ್ನು ಹಿಂಡಾಲ್ಕೊ ಕಂಪನಿಗೆ ನೀಡುವುದಕ್ಕೆ ಶಿಫಾರಸ್ಸು ಮಾಡಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಿಬಿಐ ಗೆ ತಿಳಿಸಿದ್ದಾರೆ.
ಕಲ್ಲಿದ್ದಲು ಹಗರಣದ ವಿಚಾರಣೆ ವೇಳೆ ಹೇಳಿಕೆ ನೀಡಿರುವ ಮಾಜಿ ಪ್ರಧಾನಿ, ಹಿಂಡಾಲ್ಕೊ ಕಂಪನಿಗೆ ಕಲ್ಲಿದ್ದಲು ಹಂಚಿಕೆ ಮಾಡುವುದಾಗಿ ಕುಮಾರ್ ಮಂಗಲಂ ಬಿರ್ಲಾ ಗೆ ಭರವಸೆ ನೀಡಿರಲಿಲ್ಲ, ಬಿರ್ಲಾ ಪತ್ರಗಳನ್ನು ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಕುಮಾರ್ ಪಟ್ನಾಯಕ್ ಪತ್ರಗಳನ್ನು ಕೂಲಂಕುಶವಾಗಿ ಪರಿಶೀಲಿಸಲು ಕಲ್ಲಿದ್ದಲು ಸಚಿವಾಲಯಕ್ಕೆ ಕಳಿಸಿದ್ದಾಗಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಕಲ್ಲಿದ್ದಲು ಹಂಚಿಕೆಗೆ ಹಿಂಡಾಲ್ಕೊ ಕಂಪನಿಯನ್ನು ಪರಿಗಣಿಸದೇ ಇದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಬದಲಾಯಿಸಲು ಬಿರ್ಲಾ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಗೆ ಪತ್ರ ಬರೆದಿದ್ದರು. ಇದರೊಂದಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಹ ಕೇಂದ್ರ ಸರ್ಕಾರದ ನಿರ್ಧಾರವನ್ನು ಮತ್ತೆ ಪರಿಶೀಲಿಸಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.
ಹಿಂಡಾಲ್ಕೊ ಸಂಸ್ಥೆಗೆ ಅವಕಾಶ ನೀಡಲು ಸಚಿವಾಲಯ ಮಾಡಿದ್ದ ಶಿಫಾರಸ್ಸನ್ನು ಅನುಮೋದಿಸಿದ್ದೆ. ಆದರೆ ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.