ದೇಶ

ಈ ಪೋರನಿಗೆ ಕಾಗೆ ಭಾಷೆ ಗೊತ್ತು!

Rashmi Kasaragodu
ಲಕ್ನೋ: ಈ ಪೋರನ ಹೆಸರು ದೀಪು, ಗುಜರಿ ವಸ್ತುಗಳನ್ನು ಹೆಕ್ಕುವುದು ಈತನ ಕೆಲಸ. ಆದರೆ ಪಿತೃಪಕ್ಷ ಬಂತೆಂದರೆ 9 ರ ಹರೆಯದ ಈ ಹುಡುಗನಿಗೆ ಬಿಡುವಿಲ್ಲದ ಕೆಲಸ. ಪಿತೃತರ್ಪಣ ನೀಡಿ ಕಾಗೆಯನ್ನು ಕರೆಯಬೇಕೆಂದರೆ ಈ ಹುಡುಗ ಬರಬೇಕು. ದೀಪುವಿಗೆ ಕಾಗೆಗಳ ಭಾಷೆ ಗೊತ್ತು. ದೀಪು ಕರೆದನೆಂದರೆ ಸಾಕು, ಹಿಂಡು ಹಿಂಡಾಗಿ ಕಾಗೆಗಳು ಬರತೊಡಗುತ್ತವೆಯಂತೆ.
ಲಕ್ನೋದಿಂದ 225 ಕಿಲೋಮೀಟರ್ ದೂರದಲ್ಲಿರುವ ಬರೇಲಿ ನಿವಾಸಿ ಈತ. ಕಾಗೆಗಳ ಭಾಷೆಯನ್ನು ಅರ್ಥೈಸುವ ಸಾಮರ್ಥ್ಯ ಈತನಿಗೆ ಇರುವುದರಿಂದ ಈತನನ್ನು ಕಾಗೆ ಹುಡುಗ ಎಂದೇ ಕರೆಯುತ್ತಾರೆ.
ಸಂಸ್ಕಾರ ಕ್ರಿಯೆಗಳನ್ನು ಮಾಡುವ ಪವಿತ್ರ ಸ್ಥಳವಾಗಿದೆ ಬರೇಲಿ. ಇಲ್ಲಿ ಪಿತೃತರ್ಪಣ ನೀಡಲು ಸಹಸ್ರ ಸಂಖ್ಯೆಯಲ್ಲಿ ಜನರು ಬರುತ್ತಿರುತ್ತಾರೆ.
ಮೃತ್ಯುದೇವನಾದ ಯಮನ ಸಂದೇಶ ವಾಹಕಗಳು ಕಾಗೆ ಎಂಬ ವಿಶ್ವಾಸ ಜನರಲ್ಲಿದೆ.  ಆದ್ದರಿಂದ ಮರಣವನ್ನಪ್ಪಿರುವ ಪಿತೃಗಳನ್ನು ಮನಸ್ಸಲ್ಲೇ ಧ್ಯಾನಿಸಿ  ಪಿಂಡವನ್ನರ್ಪಿಸಿದಾಗ ಅದನ್ನು ಕಾಗೆಗಳು ತಿಂದರೆ ಪಿತೃತರ್ಪಣ ಸಂಪೂರ್ಣವಾಗುತ್ತದೆ. ಬರೇಲಿ ರಾಂಗಂಗೆಯಲ್ಲಿ ಪಿತೃತರ್ಪಣ ನೀಡಲು ಬರುವ ಜನರಿಗೆ ಕಾಗೆಯನ್ನು ಕರೆಯಬೇಕೆಂದರೆ ಅಲ್ಲಿ  ದೀಪುವೇ ಬೇಕು. 
ನಾನು ಯಾವಾಗ ಕರೆದರೂ ಕಾಗೆಗಳು ನನ್ನಲ್ಲಿಗೆ ಬರುತ್ತವೆ. ಅವು ನನ್ನ ಬೆಸ್ಟ್ ಫ್ರೆಂಡ್ಸ್ ಅಂತಾನೆ ದೀಪು.
ದೀಪು ಮತ್ತು ಕಾಗೆಗಳ ಗೆಳೆಯತನಕ್ಕೆ ಮೂರು ವರ್ಷ. ಕ್ಷಯರೋಗ ಬಾಧಿಸಿ ದೀಪುವಿನ ಅಪ್ಪ ಮರಣಹೊಂದಿದ್ದರು. ಹಳೇ ಪಾತ್ರೆ, ಕಬ್ಬಿಣ, ಪೇಪರ್, ಗುಜರಿ ಸಾಮಾನುಗಳನ್ನು ಹೆಕ್ಕುತ್ತಾ ದೀಪು ಕುಟುಂಬದ ಹೊಣೆ ಹೊತಿತಿದ್ದಾನೆ. ಒಂದು ಸಾರಿ ಗುಜರಿ ಹೆಕ್ಕುವಾಗ ಕಾಗೆಗಳನ್ನು ಗಮನಿಸಿದ ದೀಪು ಅನಂತರ ಅವುಗಳ ದನಿಯನ್ನು ಅನುಕರಿಸತೊಡಗಿದನು. ಅವನ ದನಿಗೆ ಕಾಗೆಗಳು ಪ್ರತಿಕ್ರಿಯಿಸತೊಡಗಿದ ನಂತರ ಕಾಗೆಗಳ ಜತೆ ಸ್ನೇಹ ಬೆಳೆಯಿತು.
ದೀಪು ಊಟ ಮಾಡುವಾಗಲೂ ಅದರರ್ಧವನ್ನು ಕಾಗೆಗಳಿಗೆ ಹಂಚುತ್ತಾನೆ. ಈಗ ದೀಪು ಕರೆದಾಗಲೆಲ್ಲಾ ಕಾಗೆಗಳು ಓಡೋಡಿ ಬರುತ್ತವೆ. ಇನ್ನುಳಿದ ಪಕ್ಷಿಗಳ  ದನಿಯನ್ನು ಅನುಕರಿಸಲು ದೀಪು ಪ್ರಯತ್ನ ಆರಂಭಿಸಿದ್ದಾನೆ.
SCROLL FOR NEXT