ದದ್ರಿ ಹತ್ಯೆಗೆ ಪ್ರಧಾನಿ ಮೌನಕ್ಕೆ ಆಕ್ರೋಶ
ದನದ ಮಾಂಸ ತಿಂದಿದ್ದಾನೆ ಎಂಬ ಪುಕಾರಿನಿಂದಾಗಿ ವ್ಯಕ್ತಿ ಹತ್ಯೆಗೆ ಸಂಬಂಧಿಸಿದ ಘಟನೆ ಈಗ ರಾಜಕೀಯ ತಿರುವು ಪಡೆಯುತ್ತಿದೆ...
ನವದೆಹಲಿ: ದನದ ಮಾಂಸ ತಿಂದಿದ್ದಾನೆ ಎಂಬ ಪುಕಾರಿನಿಂದಾಗಿ ವ್ಯಕ್ತಿ ಹತ್ಯೆಗೆ ಸಂಬಂಧಿಸಿದ ಘಟನೆ ಈಗ ರಾಜಕೀಯ ತಿರುವು ಪಡೆಯುತ್ತಿದೆ. ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನದ ಬಗ್ಗೆ ಪ್ರಮುಖ ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಘಟನೆ ನಡೆದ ಸ್ಥಳಕ್ಕೆ ಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಶುಕ್ರವಾರ ಭೇಟಿ ನೀಡಿದ್ದರು. ಅದೊಂದು ಪೂರ್ವಯೋಜಿತ ಷಡ್ಯಂತ್ರ, ಕೊಲೆ ಎಂದು ಕರೆದಿದ್ದಾರೆ. ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಎಂದು ಹೇಳುವ ಪ್ರಧಾನಿ ಟ್ವೀಟ್ ಮೂಲಕವಾದರೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಬಹುದಾಗಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ. ಟಿಎಂಸಿ, ಸಿಪಿಐ, ಸಮಾಜವಾದಿ ಪಕ್ಷಗಳೂ ಕೂಡ ಪ್ರಧಾನಿ ಮೌನವನ್ನು ಪ್ರಶ್ನಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಓವೈಸಿ, ಇದು ಕೇವಲ ಮಾಂಸದ ವಿಚಾರಕ್ಕಾಗಿ ನಡೆದ ಹತ್ಯೆಯಲ್ಲ. ಧರ್ಮದ ಆಧಾರದಲ್ಲಿ ನಡೆದ ಕೊಲೆ. ಇದರ ಹಿಂದೆ ಪೂರ್ವ ಯೋಜಿತ ಸಂಚು ಅಡಗಿದೆ ಎಂದು ಆರೋಪಿಸಿದ್ದಾರೆ.
ಮಹೇಶ್ ಶರ್ಮಾ ವಿರುದ್ಧವೂ ಕಿಡಿಕಾರಿರುವ ಓವೈಸಿ, ಘಟನೆಯನ್ನು ಷರತ್ತುರಹಿತವಾಗಿ ಖಂಡಿಸುವ ಪ್ರಾಮಾಣಿಕತೆಯೂ ಸಚಿವರಿಗೆ ಇಲ್ಲ ಎಂದು ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಈ ರೀತಿಯ ಘಟನೆ ನಡೆದಾಗ ಅವರು ತಾವು ಹೇಳುವುದನ್ನು ಕಾರ್ಯರೂಪಕ್ಕೆ ಇಳಿಸಬೇಕು. ಮೃತ ವ್ಯಕ್ತಿ ಕುಟುಂಬಕ್ಕೆ ಕನಿಷ್ಠ ಸಾಂತ್ವನವನ್ನಾದರೂ ನೀಡಬೇಕು ಎಂದು ಆಗ್ರಹಿಸಿದ್ದಾರೆ. ರಾಜಿನಾಮೆ ಕೊಡಲ್ಲ: ಗ್ರೇಟರ್ ನೋಯ್ಡಾ ಸಂಸದ ರೂ ಆಗಿರುವ ಸಚಿವ ಮಹೇಶ್ ಶರ್ಮಾ ಗುಂಪಿನಿಂದ ಹತ್ಯೆಯಾಗಿರುವ ವ್ಯಕ್ತಿ ಮನೆಗೆ ಭೇಟಿ ನೀಡಿದರು. ಇದೊಂದು ಆಕಸ್ಮಿಕ ಘಟನೆ. ಅದಕ್ಕೆ ಕೋಮು ಬಣ್ಣ ನೀಡುವುದು ಬೇಡ ಎಂದರು. ಘಟನೆ ಬಗ್ಗೆ ತಮ್ಮ ರಾಜಿನಾಮೆಗೆ ಒತ್ತಾಯಿಸಲಾಗುತ್ತಿದೆ. ಪ್ರಧಾನಿಗೆ ಮಾತ್ರ ಈ ಬಗ್ಗೆ ಅಧಿಕಾರವಿದೆ ಎಂದಿದ್ದಾರೆ.
ಪಿಂಕ್ ಕ್ರಾಂತಿ ವಿರುದ್ಧ ಮಾತನಾಡುವವರು ದೇಶದಿಂದ ದನದ ಮಾಂಸ ರಫ್ತನ್ನೇ ನಿಷೇಧಿಸಲಿ. ಯಾಕೆಂದರೆ ಈಗ ಅವರದ್ದೇ ಸರ್ಕಾರ ಅಧಿಕಾರದಲ್ಲಿದೆ.
-ಅಖಿಲೇಶ್ ಯಾದವ್ ಉತ್ತರಪ್ರದೇಶ ಸಿಎಂ
ದನದ ಮಾಂಸ ಮಾರಾಟ ರಫ್ತಿಗೆ ನಿಷೇಧ ಇದೆ. ಗೋ ಹತ್ಯೆ ನಿಷೇಧ ವಿಚಾರ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಇಲ್ಲ. ಅದೇನಿದ್ದರೂ ರಾಜ್ಯಸರ್ಕಾರಗಳ ಕಾರ್ಯವ್ಯಾಪ್ತಿಗೆ ಒಳಪಟ್ಟಿದೆ.
-ನಿರ್ಮಲಾ ಸೀತಾರಾಮನ್ ಕೇಂದ್ರ ಸಚಿವೆ
ಸಬ್‍ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಮೋದಿ ಅವರು ಇಖ್ಲಾಕ್ ಹತ್ಯೆ ಬಗ್ಗೆ ಪ್ರತಿಕ್ರಿಯಿಸಬಹುದಿತ್ತು. ಈ ಮೂಲಕ ಕಾನೂನು ಮತ್ತು ಬಹುಸಂಸ್ಕೃತಿಯನ್ನು ಎತ್ತಿಹಿಡಿಯಬಹುದಿತ್ತು.
-ಅಸಾದುದ್ದೀನ್ ಒವೈ ಸಿ ಎಂಐಎಂ ನಾಯಕ