ಮುಂಬೈ: ವಿವಾದಿತ ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಬಗ್ಗೆ ಕೇಳಿ ಬಂದ ಮಾಟಮಂತ್ರ ಕಾಯ್ದೆ ಉಲ್ಲಂಘನೆ ಕುರಿತಂತೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ಮುಂಬೈ ಪೊಲೀಸರು ಬಾಂಬೆ ಹೈ ಕೋರ್ಟ್ ಗೆ ಸೋಮವಾರ ಹೇಳಿದ್ದಾರೆ.
ತುಂಡುಡುಗೆ ಹಾಗೂ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಹಲವು ವಿವಾದಗಳನ್ನು ಸೃಷ್ಟಿಸಿದ್ದ ಸ್ವಯಂ ಘೋಷಿತ ದೇವಮಹಿಳೆ ರಾಧೆ ಮಾ ಮಾಟಮಂತ್ರ ಮಾಡುತ್ತಿದ್ದು ಸತ್ಸಂಗದಲ್ಲಿ ಭಕ್ತರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆಂದು ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಬಾಂಬೆ ಹೈ ಕೋರ್ಟ್ ತನಿಖೆಗೆ ಆದೇಶಿಸಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡು ಪೊಲೀಸರು ರಾಧೆ ಮಾಗೆ ಸಂಬಂಧಿಸಿದ ಎಲ್ಲಾ ಸ್ಥಳಗಳು ಹಾಗೂ ಸಂಸ್ಥೆಗಳಲ್ಲಿ ತನಿಖೆ ನಡೆಸಿದ್ದಾರೆ. ಆದರೆ ತನಿಖೆ ವೇಳೆ ರಾಧೆ ಮಾ ಮಾಟಮಂತ್ರ ಕಾಯ್ದೆ ಉಲ್ಲಂಘನೆ ಮಾಡಿರುವ ಕುರಿತಂತೆ ಈ ವರೆಗೂ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.