ದೇಶ

ಮುಂದುವರೆದ ವಾರಣಾಸಿ ಘರ್ಷಣೆ: 50ಕ್ಕೇರಿದ ಬಂಧಿತರ ಸಂಖ್ಯೆ

Srinivasamurthy VN

ವಾರಣಾಸಿ: ಹಿಂದೂಗಳ ಪವಿತ್ರ ಕ್ಷೇತ್ರ ವಾರಣಾಸಿಯಲ್ಲಿ ಆರಂಭವಾಗಿರುವ ಘರ್ಷಣೆ ಮುಂದುವರೆದಿದ್ದು, ಗಲಭೆ ನಿಯಂತ್ರಿಸಲು ಹರ ಸಾಹಸ ಪಡುತ್ತಿರುವ ಪೊಲೀಸರು ಮಂಗಳವಾರ 50ಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಗಣೇಶ ಮೂರ್ತಿಗಳನ್ನು ಗಂಗಾನದಿಯಲ್ಲಿ ವಿಸರ್ಜನೆ ಮಾಡಲು ಅನುವು ಮಾಡಿಕೊಡಬಾರದು ಎಂದು ಹೇಳಿ ಕಳೆದ ಸೆಪ್ಟೆಂಬರ್ 22ರಂದು ವಾರಣಾಸಿಯಲ್ಲಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ನೋಡನೋಡುತ್ತಿದ್ದಂತೆಯೇ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ನಡೆದ ಘರ್ಷಣೆಯಲ್ಲಿ ಕೆಲ ಧಾರ್ಮಿಕ ಮುಖಂಡರ ಮೇಲೂ ಹಲ್ಲೆಯಾಗಿತ್ತು.

ಪೊಲೀಸರ ಈ ದೌರ್ಜನ್ಯವನ್ನು ವಿರೋಧಿಸಿದ ಧಾರ್ಮಿಕ ನಾಯಕರು ನಿನ್ನೆ ಮಧ್ಯಾಹ್ನದಿಂದ ವಾರಣಾಸಿಯಲ್ಲಿ ಕಾಲ್ನಡಿಗೆ ಮೂಲಕ ಪ್ರತಿಭಟನೆಗಿಳಿದಿದ್ದರು. ಧಾರ್ಮಿಕ ನಾಯಕ ಈ ಪ್ರತಿಭಟನೆಗೆ ಸ್ಥಳೀಯ ನಾಗರೀಕರು ಕೈ ಜೋಡಿಸಿದ್ದರು. ಪ್ರತಿಭಟನೆ ನಡೆಯುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಗಳು ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಉದ್ರಿಕ್ತರಾದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿಗಿಳಿದಿದ್ದಾರೆ. ಈ ವೇಳೆ ಕೆಲವು ಪ್ರತಿಭಟನಾಕಾರರು ಸ್ಥಳದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಕೆಲವು ಘಂಟೆಗಳ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಲುವಾಗಿ ಸ್ಥಳೀಯ ಪೊಲೀಸರು ದಶಾಶ್ವಮೇಧ, ಚೌಕ, ಕೊತ್ವಾಲಿ ಮತ್ತು ಲಕ್ಸಾ  ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಈ ವರೆಗೂ ವಾರಣಾಸಿಯಲ್ಲಿ ಸುಮಾರು 50 ಮಂದಿ ಪ್ರತಿಭಟನಾಕಾರರನ್ನು ಬಂಧಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಘರ್ಷಣೆಯಿಂದಾಗಿ ಈ ವರೆಗೂ 8 ಮಂದಿ ಪೊಲೀಸರು ಸೇರಿದಂತೆ ಸುಮಾರು 25 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳದಲ್ಲಿ ವಾರಣಾಸಿ ಜಿಲ್ಲಾಧಿಕಾರಿ ರಾಜಮಣಿ ಯಾದವ್ ಅವರು ಸೇರಿದಂತೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಮೊಕ್ಕಾಂ ಹೂಡಿದ್ದು, ಭಧ್ರತೆಯನ್ನು ಹೆಚ್ಚಿಸಿದ್ದಾರೆ. ಇನ್ನು ಘರ್ಷಣಾ ನಿರತ ಪ್ರದೇಶಗಳಲ್ಲಿ ಅರೆಸೇನಾ ಪಡೆಗಳು, ತುರ್ತು ಪ್ರಹಾರ ದಳ, ಅಶ್ರುವಾಯು ದಳ, ಜಲಫಿರಂಗಿ ವಾಹನಗಳನ್ನು ಕರೆಯಿಸಿಕೊಳ್ಳಲಾಗಿದೆ.

SCROLL FOR NEXT