ನವದೆಹಲಿ: ದೇಶದಲ್ಲಿ ಅತ್ಯಂತ ಹೆಚ್ಚು ಸಂಬಳ ಪಡೆಯಲಿರುವ ಶಾಸಕರು ಯಾರು ಗೊತ್ತೇ? ಉತ್ತರ ದೆಹಲಿ.
ಶಾಸಕರ ಸಂಬಳ ಮತ್ತು ಭತ್ಯೆ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ರಚಿಸಲಾಗಿರುವ ಸಮಿತಿ ಹಾಲಿ ಇರುವ ಮಿತಿಗಿಂತ ಶೇ.400ರಷ್ಟು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದೆ. ಅದಕ್ಕೆ ಅನುಮೋದನೆ ದೊರಕಿದಲ್ಲಿ ದೆಹಲಿಯ ಆಮ್ ಆದ್ಮಿ ಪಾರ್ಟಿಯ ಶಾಸಕರಿಗೆ ಪ್ರತಿ ತಿಂಗಳು ರು. 2.10 ಲಕ್ಷದಷ್ಟು ವೇತನ ಸಿಗಲಿದೆ.
ಅಂದ ಹಾಗೆ ಸದ್ಯ ದೆಹಲಿ ಶಾಸಕನ ಪ್ರತಿ ತಿಂಗಳ ಸಂಬಳ ರು. 82 ಸಾವಿರ. ಲೋಕಸಭೆ ಸೆಕ್ರೆಟರಿ ಜನರಲ್ ಪಿ.ಡಿ.ಟಿ ಆಚರಿ ನೇತೃತ್ವದ ಸಮಿತಿ ಈ ಶಿಫಾರಸು ಮಾಡಿದೆ. 2011ರಲ್ಲಿ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಶೇ. 100ರಷ್ಟು ವೇತನ ಪರಿಷ್ಕರಣೆ ಮಾಡಲಾಗಿತ್ತು.
ಜುಲೈನಲ್ಲಿ ಆಪ್ ನ ಶಾಸಕರು ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಹಾಲಿ ವೇತನ ಮತ್ತು ಭತ್ಯೆಯಲ್ಲಿ ಕುಟುಂಬ ಮತ್ತು ಕಚೇರಿ ವೆಚ್ಚ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಅಹವಾಲು ಸಲ್ಲಿಸಿದರು. ಸಾಂವಿಧಾನಿಕವಾಗಿ ಯಾವ ಅರ್ಹತೆ ಇದೆಯೋ ಅದಕ್ಕನುಸಾರವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಗೋಯಲ್ ತಿಳಿಸಿದ್ದಾರೆ.
ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸಂಜಯ ಸಿಂಗ್ ಮಾತ್ರ. ದೆಹಲಿ ರಾಜ್ಯ ವ್ಯಾಪ್ತಿಯಲ್ಲಿ ಬರಗಾಲ ಮತ್ತಿತರ ಸಮಸ್ಯೆಗಳು ಹೆಚ್ಚಾಗಿವೆ. ಈ ಹಂತದಲ್ಲಿ ವೇತನ ಪರಿಷ್ಕರಣೆಬೇಡ ಎಂದು ಅವರು ಟೀಕಿಸಿದ್ದಾರೆ.