ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ
ಬಿಕಾನೇರ್: ಭಾರತ ಪಾಕಿಸ್ತಾನ ನಡುವಿನ ಭಾವನಾತ್ಮಕ ಸಂದೇಶ ಸಾರುವ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಬಾಲಿವುಡ್ ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದು ಇತಿಹಾಸ. ಇದೇ ರೀತಿಯ ಘಟನೆಯೊಂದು ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ನಡೆದಿದೆ.
ತಾಯಿಯೊಂದಿಗೆ ಭಾರತಕ್ಕೆ ಬರುವ ಬಾಲಕಿಯೊಬ್ಬಳು ಪಾಕಿಸ್ತಾನಕ್ಕೆ ಮರುಳುವಾಗ ಅನಿರೀಕ್ಷಿತವಾಗಿ ಭಾರತದೊಳಗೆ ಉಳಿದು ನಂತರ ಸಲ್ಮಾನ್ ಖಾನ್ ಬಾಲಕಿಯನ್ನು ಸುರಕ್ಷಿತವಾಗಿ ತಾಯಿಯ ಮಡಿಲಿಗೆ ಸೇರಿಸುವ ಕಥಾ ಹಂದರವನ್ನೊಳಗೊಂಡ ವಿಶಿಷ್ಟಚಿತ್ರವಾಗಿತ್ತು. ಇದೀಗ ಇದೇ ಚಿತ್ರವನ್ನು ನೆನಪಿಸುವಂತಹ ಘಟನೆ ಬೆಳಕಿಗೆ ಬಂದಿದ್ದು, ದಾರಿ ತಪ್ಪಿ ಭಾರತದ ಅಂತಾರಾಷ್ಟ್ರೀಯ ಗಡಿ ಪ್ರವೇಶಿಸಿದ್ದ ಪಾಕ್ ಪ್ರಜೆಯೊಬ್ಬನನ್ನು ಗುರುತಿಸಿ ಸುರಕ್ಷಿತವಾಗಿ ಆತನ ಸ್ವದೇಶಕ್ಕೆ ಕಳುಹಿಸಿಕೊಡಲಾಗಿದೆ.
ಸುಮಾರು 20 ವರ್ಷದ ಗುಲಾಮ್ ರಸೂಲ್ ಎಂಬ ಯುವಕ ಭಾನುವಾರ ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿರುವ ಇಂಡೋ-ಪಾಕ್ ಗಡಿಯಲ್ಲಿ ಪತ್ತೆಯಾಗಿದ್ದ. ಅನುಮಾನದ ಮೇರೆಗೆ ಈತನನ್ನು ವಶಕ್ಕೆ ಪಡೆದ ಬಿಎಸ್ಎಫ್ ಯೋಧರು ಆತನ ವಿಚಾರ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗುಲಾಮ್ ರಸೂಲ್ ನನ್ನು ಸಂಪೂರ್ಣ ಶೋಧ ಮಾಡಿದ ಯೋಧರು ಆತನ ಬಳಿ ಆಕ್ಷೇಪಾರ್ಹ ವಸ್ತುಗಳು ಏನೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಪಾಕ್ ಸೈನಿಕರ ಸುಪರ್ದಿಗೆ ವಹಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಬಳಿಕ ಪಾಕಿಸ್ತಾನದ ಸೇನಾಧಿಕಾರಿಗಳನ್ನು ಸಂಪರ್ಕಿಸಿ ನಡೆದ ವಿಚಾರ ತಿಳಿಸಿ ಗುಲಾಮ್ ರಸೂಲ್ ನನ್ನು ಇಂದು ಪಾಕ್ ಸೈನಿಕರ ಸುಪರ್ದಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.