ಪಾಟ್ನ: ಬಹು ನಿರೀಕ್ಷಿತ ಬಿಹಾರ ಚುನಾವಣೆಯ ಪ್ರಥಮ ಹಂತದ ಮತದಾನ ಸೋಮವಾರ ಆರಂಭಗೊಂಡಿದ್ದು, ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.
ಪ್ರಥಮ ಹಂತದ ಈ ಚುನಾವಣೆಯುಇಂದು ಬೆಳಿಗ್ಗೆ 7ರಿಂದ 3 ಗಂಟೆಯವರೆಗೂ ನಡೆಯಲಿದ್ದು, ಬಿಹಾರದ ತಾರಾಪುರ್, ಜಮಲ್ ಪುರ, ಸೂರ್ಯಗ್ರಹ, ರಜೌಲಿ, ಗೋವಿಂದ್ ಪುರ, ಸಿಕಂದರ್, ಜಮುಯ್, ಝಾಝಾ ಸೇರಿದಂತೆ ಒಟ್ಟು 9 ಜಿಲ್ಲೆಗಳಲ್ಲಿ ನಡೆಯಲಿದೆ. 49 ಕ್ಷೇತ್ರಗಳಲ್ಲಿ ನಡೆಯುವ ಈ ಮತದಾನವು 583 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದೆ.
ಬೇಗು ಸರಾಯ್, ಕಗಾಡಿಯಾ, ಸಮಷ್ಟಿಪುರ, ಭಾಗಲ್ಪುರ, ಬಾಕಾ, ಲಕ್ಕಿ ಸರಾಯ್, ಶೇಖ್‌ಪುರ, ನವಾಡ ಮತ್ತು ಜಮೂಯಿ ಜಿಲ್ಲೆಗಳು ಸೇರಿದಂತೆ ಒಟ್ಟು 49 ಕ್ಷೇತ್ರಗಳ ಸ್ಪರ್ಧಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. 1,35,72,339 ಮತದಾರರು ಚುನಾವಣೆಯಲ್ಲಿ ಮತದಾನ ಮಾಡಲಿದ್ದು, 49 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 583 ಅಭ್ಯರ್ಥಿಗಳಲ್ಲಿ ಯಾರು ಜಯಭೇರಿ ಸಾಧಿಸುತ್ತಾರೆ ಎಂಬುದು ನಿರ್ಧಾರವಾಗಲಿದೆ.
ಬಿಹಾರ ಚುನಾವಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗದ ಮುಖ್ಯಸ್ಥ ಆರ್. ಲಕ್ಷ್ಮಣ್ ಅವರು, ನಕ್ಸಲ ದಾಳಿ ಭೀತಿ ಇರುವುದರಿಂದ ಎಚ್ಚರಿಕೆ ಕ್ರಮ ಕೈಗೊಂಡಿರುವ ಆಯೋಗವು ಇದೀಗ 13 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಸಮಯವನ್ನು ಕಡಿತಗೊಳಿಸಲಾಗಿದೆ. ಅಲೌಲಿ, ಬೆಲ್ದೌರ್, ಕಟೋರಿಯಾ ಮತ್ತು ಬಲ್ಹಾರ್ ಪ್ರದೇಶಗಳಲ್ಲಿ ಬೆಳಿಗ್ಗೆ 7 ರಿಂದ ಪ್ರಾರಂಭವಾಗುವ ಮತದಾನವು ಸಂಜೆ 4ರವರೆಗೆ ನಡೆಯಲಿದೆ. ಇನ್ನುಳಿದ 36 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆ 5ರವರೆಗೂ ನಡೆಯಲಿದೆ. ಪ್ರಸ್ತುತ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 72,37,253 ಪುರುಷರು, 63,17,602 ಮಹಿಳೆಯರು ಮತ್ತು 405 ತೃತೀಯ ಲಿಂಗಿಗಳು ಮತದಾನ ಮಾಡಲಿದ್ದಾರೆ. ಮತದಾನ ಪ್ರಕ್ರಿಯೆಗೆ ಯಾವುದೇ ಆಡಚಣೆಯಾಗದಂತೆ ಈ ಕ್ರಮಕೊಳ್ಳಲಾಗಿದ್ದು, ಒಟ್ಟು 1.20 ಲಕ್ಷ ಕೇಂದ್ರ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್‌ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದು, ಇನ್ನು ದೆಹಲಿಯಲ್ಲಿ ಅರವಿಂದ್‌ಕೇಜ್ರಿವಾಲ್ ಮುಂದೆ ಸೋತು ಮುಖಭಂಗ ಅನುಭವಿಸಿದ ಬಿಜೆಪಿ ತನ್ನ ಗೌರವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಇದರಿಂದ ಎರಡೂ ಮೈತ್ರಿ ಕೂಟಗಳಿಗೂ ಬಿಹಾರ ಚುನಾವಣೆ ಇದೀಗ ಪ್ರತಿಷ್ಠೆಯ ವಿಷಯವಾಗಿದೆ.
ಎರಡೂ ಮೈತ್ರಿ ಕೂಟಗಳು ಮತದಾರರನ್ನು ಓಲೈಸಲು ಎಲ್ಲ ತಂತ್ರಗಳನ್ನು ಬಳಸುತ್ತಿದ್ದು, ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಲ್ಕೈದು ಬಾರಿ ಸಾರ್ವಜನಿಕ ಭಾಷಣಗಳನ್ನು ಮಾಡಿದ್ದಾರೆ. ಅಭಿವೃದ್ಧಿ ಯೋಜನೆ ಜಾರಿಗೊಳಿಸುವ ಮೂಲಕ ಹಿಂದುಳಿದ ರಾಜ್ಯವಾಗಿ ಮಾರ್ಪಾಡಾಗಿರುವ ಬಿಹಾರ ರಾಜ್ಯದ ಚಿತ್ರಣ ಬದಲಾಯಿಸುವ ಭರವಸೆ ನಾಯಕರು ಕೊಟ್ಟಿದ್ದಾರೆ. ಎನ್‌ಡಿಎ ಪ್ರಣಾಳಿಕೆಯು ಬಿಹಾರ ಜನತೆಗೆ ಈಗಾಗಲೇ ಅನೇಕ ಆಶ್ವಾಸನೆ ನೀಡಿದೆ.