ದೇಶ

ಭ್ರಷ್ಟಾಚಾರವನ್ನು ರೋಗವೆಂದು ಪರಿಗಣಿಸಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

Sumana Upadhyaya

ನವದೆಹಲಿ: ಭ್ರಷ್ಟಾಚಾರ ದೇಶದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದ್ದು, ಅದನ್ನು ಒಂದು ಕಾಯಿಲೆಯಾಗಿ ಪರಿಗಣಿಸಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಭ್ರಷ್ಟಾಚಾರ ದೇಶದ ಬೆಳವಣಿಗೆ ಮೇಲೆ ಪರಿಣಾಮ ಬೀರಿ ಸರ್ಕಾರದ ಆದಾಯವನ್ನು ಕುಂಠಿತಗೊಳಿಸುತ್ತದೆ. ಆದಾಯ ಮತ್ತು ಸಂಪತ್ತು ಹಂಚಿಕೆಯಲ್ಲಿ ಅಸಮತೋಲನವನ್ನುಂಟುಮಾಡುತ್ತದೆ. ಇದು ದೇಶದ ಅಭಿವೃದ್ಧಿ ಕುಂಠಿತಕ್ಕೆ ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಾಗೃತಿಯನ್ನುಂಟುಮಾಡಿ ಭ್ರಷ್ಟಾಚಾರದ ಪಿಡುಗಿನ ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ಹೇಳಿದ್ದಾರೆ. ಅವರು ಅಕ್ಟೋಬರ್ 26ರಿಂದ ಒಂದು ವಾರಗಳ ಕಾಲ ದೇಶಾದ್ಯಂತ ಆಚರಿಸಲಿರುವ ಜಾಗೃತ ಸಪ್ತಾಹದ ಹಿನ್ನೆಲೆಯಲ್ಲಿ ನೀಡಿರುವ ಸಂದೇಶದಲ್ಲಿ ಹೇಳಿದ್ದಾರೆ.

ಭ್ರಷ್ಟಾಚಾರವನ್ನು ಒಂದು ರೋಗವೆಂದು ಪರಿಗಣಿಸಿ ಅದನ್ನು ತಡೆಗಟ್ಟಲು ಶ್ರಮಿಸಬೇಕು ಎಂದರು. ಈ ವರ್ಷ ಕೇಂದ್ರ ಜಾಗೃತ ಆಯೋಗವು ಉತ್ತಮ ಆಡಳಿತಕ್ಕೆ ತಡೆ ಜಾಗೃತಿ ಎಂಬ ಧ್ಯೇಯವನ್ನು ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿದೆ. ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಸರಿಯಾದ ನಿಯಮವನ್ನು ಅಳವಡಿಸಿಕೊಂಡರೆ ಭ್ರಷ್ಟಾಚಾರವನ್ನು ತಡೆಗಟ್ಟಬಹುದು ಎಂದು ರಾಷ್ಟ್ರಪತಿ ತಿಳಿಸಿದರು.

ಜಾಗೃತಿ ತಡೆ ವಿಧಾನದ ಮೂಲಕ ಭ್ರಷ್ಟಾಚಾರವನ್ನು ನಿಗ್ರಹಿಸಬಹುದು ಎಂದು ಉಪ ರಾಷ್ಟ್ಪಪತಿ ಹಮೀದ್ ಅನ್ಸಾರಿ ತಿಳಿಸಿದರು.ಸರ್ಕಾರಿ ಇಲಾಖೆಗಳು, ಸಂಸ್ಥೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ, ದಕ್ಷತೆ ಮತ್ತು ನಿಖರತೆಯನ್ನು ಎಲ್ಲಾ ಹಂತಗಳಲ್ಲಿಯೂ ತರುವ ಮೂಲಕ ಭ್ರಷ್ಟಾಚಾರದ ಪಿಡುಗನ್ನು ತೊಲಗಿಸಬಹುದು ಎಂದರು.

ಈ ಸಂದರ್ಭದಲ್ಲಿ ತಮ್ಮ ಸಂದೇಶ ತಿಳಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ವರ್ಷದ ಜಾಗೃತ ಸಪ್ತಾಹಕ್ಕೆ ಆಯೋಗವು ಆಯ್ಕೆ ಮಾಡಿಕೊಂಡಿರುವ ಧ್ಯೇಯ ಸರ್ಕಾರಿ ಆಡಳಿತದಲ್ಲಿ ಅಕ್ರಮ ತಡೆಗಟ್ಟುವ ಮತ್ತು ಉತ್ತಮ ಆಡಳಿತದ ಕುರಿತು ತಿಳಿಸಿ ಹೇಳುವುದಾಗಿರುತ್ತದೆ ಎಂದು ಹೇಳಿದರು.

SCROLL FOR NEXT