ದೇಶ

ಅಜಯ್ ದೇವಗನ್ ಚುನಾವಣಾ ರ್ಯಾಲಿಯಲ್ಲಿ ಹಿಂಸಾಚಾರ

Sumana Upadhyaya

ಬಿಹರ್ ಶರಿಫ್: ಬಾಲಿವುಡ್ ನಟ ಅಜಯ್ ದೇವಗನ್ ಭಾಷಣ ಮಾಡಬೇಕಿದ್ದ ಚುನಾವಣಾ ರ್ಯಾಲಿಯೊಂದು ಹಿಂಸಾಚಾರದಲ್ಲಿ ಕೊ ನೆಗೊಂಡ ಘಟನೆ ಬಿಹಾರದ ನಳಂದ ಜಿಲ್ಲೆಯ ಕೇಂದ್ರ ಸ್ಥಾನ ಬಿಹರ್ ಶರಿಫ್ ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಜಿಲ್ಲೆ ನಳಂದ ಜಿಲ್ಲೆಯ ಬಿಹರ್ ಶರಿಫ್ ನಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರ ಪರವಾಗಿ ಚುನಾವಣಾ ರ್ಯಾಲಿಯಲ್ಲಿ ಇಂದು ಬೆಳಗ್ಗೆ 10.30ಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಭಾಷಣ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು, ಆದರೆ ಅವರು ಬಂದಿದ್ದು ಮಧ್ಯಾಹ್ನ ಒಂದು ಗಂಟೆಗೆ.  ಸಾವಿರಾರು ಜನರು ನೆರೆದಿದ್ದರು.ದೇವಗನ್ ಹೆಲಿಕಾಪ್ಟರ್ ನಲ್ಲಿ ಬರುತ್ತಿದ್ದಾರೆ ಎಂದು ವಿಷಯ ತಿಳಿಯುತ್ತಿದ್ದಂತೆ  ಉದ್ರಿಕ್ತ ಗುಂಪೊಂದು ಕಲ್ಲು ಮತ್ತು ಕುರ್ಚಿಯನ್ನು ಪೊಲೀಸರೆಡೆಗೆ ಎಸೆಯಲು ಪ್ರಾರಂಭಿಸಿತು.
ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.ಈ ವೇಳೆ ಉಂಟಾದ ಗಲಭೆಯಲ್ಲಿ ಕೆಲವು ಪೊಲೀಸರು ಒಳಗೊಂಡು ಸುಮಾರು 12 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಕುಮಾರ್ ತಿಳಿಸಿದ್ದಾರೆ.
ಗಲಾಟೆಯಾದ ಹಿನ್ನೆಲೆಯಲ್ಲಿ ಅಜಯ್ ದೇವಗನ್ ಹೆಲಿಕಾಪ್ಟರ್ ನಿಂದ ಇಳಿಯದೆ ಕುಳಿತಲ್ಲಿಂದಲೇ ಜನರೆಡೆಗೆ ಕೈ ಬೀಸಿ ನಿರ್ಗಮಿಸಿದರು.

ಈ ಮೊದಲು ಅಜಯ್ ದೇವಗನ್ ಅವರು ಲಕಿಸರೈ ಮತ್ತು ಖಾಗರಿಯಾ ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡುವಾಗಲೂ ದುರ್ಘಟನೆಗಳು ನಡೆದಿದ್ದವು.

SCROLL FOR NEXT