ದೇಶ

ಸಾಹಿತಿಗಳ ಸೆಡವು: ಸಮಸ್ಯೆಗೆ ಆಕ್ರೋಶ ಪರಿಹಾರವಲ್ಲ ಎಂದ ಅಕಾಡೆಮಿ

Srinivasamurthy VN

ನವದೆಹಲಿ: ಸಾಹಿತಿಗಳ ಸೆಡವಿನಿಂದ ಗೊಂದಲಕ್ಕೀಡಾಗಿರುವ ಸಂಗೀತ ನಾಟಕ ಅಕಾಡೆಮಿಯು ಮಂಗಳವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ``ಸೃಜನಶೀಲ ವ್ಯಕ್ತಿಯ ಪಾಲಿಗೆ ಪ್ರತಿಕ್ರಿಯೆ  ಎನ್ನುವುದು ಮೊದಲ ಧರ್ಮ. ಆದರೆ, ಅದು ದಾರಿ ತಪ್ಪ ಬಾರದು, ತಪ್ಪು ವ್ಯಕ್ತಿಗಳು ಮತ್ತು ಸಂಸ್ಥೆಗಳ ಪರವಿರಬಾರದು'' ಎಂದಿದೆ. ನಮ್ಮದು ಸ್ವಾಯತ್ತ ಸಂಸ್ಥೆ. ಇಲ್ಲಿ ಪ್ರಶಸ್ತಿ ನೀಡಿದವರೂ  ಸೃಜನಶೀಲರೇ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದಿದ್ದಾರೆ.

ನಾನು ಕ್ರೌರ್ಯದ ವಿರೋಧಿ: ಪ್ರಶಸ್ತಿ ವಾಪಸ್ ನೀಡುತ್ತಿರುವ ಲೇಖಕರಿಗೆ ಬೆಂಬಲ ವ್ಯಕ್ತಪಡಿಸಿದ ಬೂಕರ್ ಪ್ರಶಸ್ತಿ ವಿಜೇತ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಾಪ್ರಹಾರ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಶ್ದಿ, ``ನಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ, ಆದರೆ ಕ್ರೌರ್ಯ ತುಂಬಿದ ಹಿಂಸೆಯನ್ನು ಖಂಡಿಸುತ್ತೇನೆ'' ಎಂದಿದ್ದಾರೆ. ಜತೆಗೆ, ``ಮೋದಿ ಟೋಡಿಗಳೇ, ಇಲ್ಲಿ ಕೇಳಿ. ನಾನು ಭಾರತದ ಯಾವುದೇ ಪಕ್ಷಕ್ಕೂ ಬೆಂಬಲ ನೀಡುವು ದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ಖಂಡಿಸುತ್ತೇನೆ.  ಸ್ವಾತಂತ್ರ್ಯವೇ ನನ್ನ ಪಕ್ಷ'' ಎಂದು ಟ್ವೀಟ್ ಮಾಡಿದ್ದಾರೆ. ಇಲ್ಲಿ ಟೋಡಿಗಳೆಂದರೆ, ಒಬ್ಬ ಪ್ರಭಾವಿ ವ್ಯಕ್ತಿಯನ್ನು ಮುಖಸ್ತುತಿ ಮಾಡುತ್ತಾ ಕಾಲ ಕಳೆಯುವವರು.

ಇದೇ ವೇಳೆ, ಮತ್ತೆ 5 ಲೇಖಕರು ಪ್ರಶಸ್ತಿ ವಾಪಸ್ ನೀಡಲು ನಿರ್ಧರಿಸಿದ್ದಾರೆ. ಅಸ್ಸಾಂ ಲೇಖಕರಾದ ನಿರುಪಮಾ ಬೊರ್ಗೊಹೈನ್, ಹೊಮೆನ್ ಬೊರ್ಗೊಹೈನ್, ಹಿಂದಿ ಅನುವಾದಕ  ಚಮನ್‍ಲಾಲ್, ಬಂಗಾಳಿ ಕವಿ ಮಂದಕ್ರಾಂತ ಸೇನ್ ಹಾಗೂ ಪಂಜಾಬ್ ಲೇಖಕಿ ಪ್ರದ್ನ್ಯಾ ಪವಾರ್ ಕೂಡ ಪ್ರಶಸ್ತಿ ಹಿಂತಿರುಗಿಸುವುದಾಗಿ ತಿಳಿಸಿದ್ದಾರೆ.

ಜಾತ್ಯತೀತತೆಯ ರೋಗ: ಆರೆಸ್ಸೆಸ್
ಪ್ರಶಸ್ತಿ ಮರಳಿಸುತ್ತಿರುವ ಲೇಖಕರು ಜಾತ್ಯತೀತತೆಯ ರೋಗದಿಂದ ನರಳುತ್ತಿದ್ದಾರೆ. ಇವರಿಗೆ ಸಿಖ್ ಹತ್ಯಾ ಕಾಂಡದ ಅಪರಾಧಿಗಳಿಂದ ಪ್ರಶಸ್ತಿ ಸ್ವೀಕರಿಸಲು ನಾಚಿಕೆಯಾಗುವುದಿಲ್ಲ ಎಂದು  ಆರ್‍ಎಸ್‍ಎಸ್ ಟೀಕಿಸಿದೆ. ಸಂಘಪರಿವಾರದ ಮುಖವಾಣಿ ಯಾದ `ಪಾಂಚಜನ್ಯ' ಸಂಪಾದಕೀ ಯದಲ್ಲಿ, ಈ ಲೇಖನಿ ಕಲಾ ನಿಪುಣರು ದೇಶವನ್ನು ಮತ್ತು ಹಿಂದೂ ಧರ್ಮ ನಾಶಮಾಡುವ ಪ್ರಯತ್ನಗಳನ್ನು ಸಹಿಸುತ್ತಾರೆ. ಜಾತ್ಯತೀತತೆ ರೋಗದಿಂದ ನರಳುತ್ತಿದ್ದಾರೆ. ನೆಹರೂ ಮಾದರಿಯೇ ಇವರಿಗೆ ಬೇಕು ಎಂದು ಬರೆಯಲಾಗಿದೆ.

ಅಸಹಿಷ್ಣುತೆ ಬಗ್ಗೆ ಕೇಂದ್ರ ಸರ್ಕಾರ ಮೃದು ಧೋರಣೆ ಹೊಂದಿದೆ ಎನ್ನುವ ಆರೋಪ ಆಧಾರರ ಹಿತ. ಮೊದಲಿಗೆ ನೀವು ಪ್ರಶಸ್ತಿಗಳನ್ನುವಾಪಸ್ ನೀಡುತ್ತಿರುವ ಲೇಖಕರು, ಸಾಹಿತಿಗಳ ಸೈದ್ಧಾಂತಿಕ ಒಲವನ್ನು ಪರೀಕ್ಷಿಸಿ. ಆಗ ನಿಮಗೆ ಸರಿಯಾದ ಉತ್ತರ ಸಿಗುತ್ತದೆ .
-ಸಿದ್ಧಾರ್ಥನಾಥ್ ಸಿಂಗ್
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

SCROLL FOR NEXT