ದೇಶ

ಕಾಲ್ ಡ್ರಾಪ್ ಪರಿಹಾರ ಕುರಿತ ಟ್ರಾಯ್ ಆದೇಶಕ್ಕೆ ಟೆಲಿಕಾಮ್ ಆಪರೇಟರ್ ಗಳ ಅಸಮಾಧಾನ

Srinivas Rao BV

ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆ ಎದುರಾದರೆ 2016 ರ ಜ.1 ರಿಂದ ಕಡ್ಡಾಯವಾಗಿ ಗ್ರಾಹಕರಿಗೆ 1ರೂಪಾಯಿ ಪರಿಹಾರ ಧನ ನೀಡಬೇಕೆಂಬ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ಆದೇಶಕ್ಕೆ ಟೆಲಿಕಾಂ ಆಪರೇಟರ್ ಗಳು ಅಸಮಾಧಾನಗೊಂಡಿವೆ.
ಕಾಲ್ ಡ್ರಾಪ್ ಸಮಸ್ಯೆ ಎದುರಾಗುವುದಕ್ಕೆ ಕಾರಣವನ್ನು ಟ್ರಾಯ್ ಸರಿಯಾಗಿ ವಿವರಿಸಿಲ್ಲ ಎಂದು ಟೆಲಿಕಾಮ್ ಆಪರೇಟರ್ ಗಳು ಆಕ್ಷೇಪ ವ್ಯಕ್ತಪಡಿಸಿವೆ. ನಿಯಮಗಳ ಪ್ರಕಾರ ಟೆಲಿಕಾಮ್ ಆಪರೇಟರ್ ಗಳು ಜಿಲ್ಲಾ ಕೇಂದ್ರಗಳಲ್ಲಿ ಶೇ.90 ರಷ್ಟು ನೆಟ್ ವರ್ಕ್ ಸೌಲಭ್ಯ ಒದಗಿಸಬೇಕಾಗುತ್ತದೆ. ಆದರೆ ಕಟ್ಟಡಗಳ ಒಳಗೆ ಅತ್ಯುತ್ತಮ ನೆಟ್ವರ್ಕ್ ಸೌಲಭ್ಯ ಕಲ್ಪಿಸುವುದನ್ನು ಖಚಿತ ಪದಿಸಲು ಯಾವುದೇ ನಿಯಮಗಳಿಲ್ಲ ಎಂದು ಟೆಲಿಕಾಮ್ ಆಪರೇಟರ್ ಗಳು ವಾದಿಸಿವೆ.
ನಿಯಮಗಳ ಪ್ರಕಾರ ನೆಟ್ವರ್ಕ್ ಸೌಲಭ್ಯ ಒದಗಿಸಲು ಟೆಲಿಕಾಮ್ ಆಪರೇಟರ್ ಗಳು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸಿಒಎಐ ಮುಖ್ಯಸ್ಥ ರಾಜನ್ ಮ್ಯಾಥ್ಯೂಸ್ ಹೇಳಿದ್ದಾರೆ. ಕಾಲ್ ಡ್ರಾಪ್ ನಿಯಮಗಳ ಬಗ್ಗೆ ಟ್ರಾಯ್ ನೊಂದಿಗೆ ಮಾತುಕತೆ ನಡೆಸುವುದು ನಮ್ಮ ಪ್ರಥಮ ಆದ್ಯತೆ, ಟ್ರಾಯ್ ನೊಂದಿಗೆ ನಡೆಸುವ ಚರ್ಚೆ ಫಲಪ್ರದವಾಗದೇ ಇದ್ದರೆ ಟೆಲಿಕಾಮ್ ಆಪರೇಟರ್ ಗಳ ಹಿತಾಸಕ್ತಿಯನ್ನು ಕಾಪಾಡಲು ಕಾನೂನಿನ ಮೊರೆ ಹೋಗುವುದಾಗಿ ರಾಜನ್ ಮ್ಯಾಥ್ಯೂಸ್ ತಿಳಿಸಿದ್ದಾರೆ.

SCROLL FOR NEXT