ದೇಶ

ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯಕ್ಕೆ ತಡೆಯೊಡ್ಡುವ ಬೆದರಿಕೆ ಹಾಕಿದ ಹಾರ್ದಿಕ್ ಪಟೇಲ್

ರಾಜ್ ಕೋಟ್: ಪ್ರಬಲ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಹೋರಾಟಕ್ಕಿಳಿದಿದ್ದ ಗುಜರಾತ್ ನ ಹಾರ್ದಿಕ್ ಪಟೇಲ್ ಇದೀಗ ಹೊಸ ವಿಷಯವೊಂದಕ್ಕೆ ಕೈ ಹಾಕಿದ್ದು, ಅ.18ರಂದು ರಾಜ್ ಕೋಟ್ ನಲ್ಲಿ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾದ ಅಂತರಾಷ್ಟ್ರೀಯ ಏಕ ದಿನ ಪಂದ್ಯಕ್ಕೆ ಆಗಮಿಸುವ ಕ್ರಿಕೆಟ್ ತಂಡಗಳಿಗೆ ತಡೆಯೊಡ್ಡುವುದಾಗಿ ಶನಿವಾರ ಬೆದರಿಯೊಡ್ಡಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ಹಾರ್ದಿಕ್ ಪಟೇಲ್ ರಾಜ್ ಕೋಟ್ ನಗರದಿಂದ ಹೊರವಲಯದ ಖಂಡೇರಿ ಗ್ರಾಮದಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂಗೆ ಪಟೇಲ್ ಸಮುದಾಯದ ಸದಸ್ಯರು ತಡೆ ಬೇಲಿಯನ್ನು ನಿರ್ಮಿಸಲಿದ್ದು, ಸಂಘಟನೆಯ ಕಾರ್ಯಕರ್ತರು ಎರಡೂ ತಂಡಗಳನ್ನೂ ಮಾರ್ಗ ನಡುವೆಯೇ ತಡೆಯಲಿದ್ದು, ಕ್ರೀಡಾಂಗಣಕ್ಕೆ ಆಗಮಿಸುವ ಕ್ರಿಕೆಟ್ ತಂಡಗಳಿಗೆ ತಡೆಯೊಡ್ಡಲಿದ್ದಾರೆ ಎಂದು ಹೇಳಿದ್ದಾನೆ. ಅಲ್ಲದೆ, ಕ್ರಿಕೆಟ್ ಪಂದ್ಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಪಂದ್ಯಾಟದ ಟಿಕೆಟ್ ಗಳನ್ನು ಈಗಾಗಲೇ ಬಿಜೆಪಿ ಕಾರ್ಯಕರ್ತರಿಗೆ ಮಾರಲಾಗಿದೆ. ತನ್ನ ಸಮುದಾಯದ ಸದಸ್ಯರಿಗೆ ಕ್ರಿಕೆಟ್ ವೀಕ್ಷಣೆಗೆ ಟಿಕೆಟ್ ಗಳನ್ನು ನೀಡಿಲ್ಲವೆಂದು ಆರೋಪಿಸಿದ್ದಾನೆ.

ಹಾರ್ದಿಕ್ ಪಟೇಲ್ ಬೆದರಿಕೆಯ ಹಿನ್ನೆಲೆಯಲ್ಲಿ, ಪೊಲೀಸರು ಸ್ಟೇಡಿಯಂ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲು ಮುಂದಾಗಿದ್ದಾರೆ. ಅಲ್ಲದೆ ನಗರದಲ್ಲಿ ವ್ಯಾಪಕ ಬಿಗಿ ಭದ್ರತೆ ಏರ್ಪಡಿಸಿ, ಕ್ರಿಕೆಟ್ ಪಂದ್ಯಾಟ ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಪೊಲೀಸರು ಮಾನವ ರಹಿತ ಹವಾ ವಾಹನಗಳು (ಯುಎವಿಗಳು) ಮತ್ತು 90 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT