ನವದೆಹಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್‌ಜೆಎಸಿ) ಅಸಂವಿಧಾನಿಕವೆಂದು ಹೇಳಿರುವ ಸುಪ್ರೀಂಕೋರ್ಟ್ ತೀರ್ಪು ದೋಷಪೂರಿತ ತರ್ಕ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಫೇಸ್ ಬುಕ್ ನ ಫೇಜ್ ನಲ್ಲಿ ತೀರ್ಪಿನ ಬಗ್ಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿರುವ ಜೇಟ್ಲಿ, ಚುನಾಯಿತ ಜನಪ್ರತಿನಿಧಿಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ಅಪಾಯ. ಭಾರತದ ಪ್ರಜಾತಂತ್ರವು ಜನರಿಂದ ನೇರವಾಗಿ ಚುನಾಯಿತರಲ್ಲದವರ ನಿರಂಕುಶ ಪ್ರಭುತ್ವವಾಗಲು ಸಾಧ್ಯವಿಲ್ಲ. ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸಿದರೆ ಅದು ಪ್ರಜಾಪ್ರಭುತ್ವದ ಅಸ್ಥಿತ್ವಕ್ಕೆ ಅಪಾಯ ಎಂದು ಬರೆದುಕೊಂಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಮುಕ್ತ ನ್ಯಾಯಾಂಗದ ಮೂಲ ರಚನೆಯನ್ನು ಎತ್ತಿ ಹಿಡಿದಿದೆ ನಿಜ. ಆದರೆ ಸಂವಿಧಾನದ ಇತರ ಐದು ಮೂಲಾಂಶಗಳೆನಿಸಿದ ಸಂಸದೀಯ ಪ್ರಜಾತಂತ್ರ, ಚುನಾಯಿತ ಪ್ರಭುತ್ವ, ಸಚಿನ ಸಂಪುಟ, ಪ್ರಧಾನಿ ಮತ್ತು ಪ್ರತಿಪಕ್ಷ ನಾಯಕರ ಪಾತ್ರವನ್ನು ಇಲ್ಲಿ ದುರ್ಬಲಗೊಳಿಸಲಾಗಿದೆ. ಇದು ಮೂಲಭೂತ ದೋಷವಾಗಿದ್ದು, ಬಹುತೇಕ ಮಂದಿ ಇಲ್ಲಿಯೇ ಎಡವಿದ್ದಾರೆ ಎಂದು ಜೇಟ್ಲಿ ಹೇಳಿಕೊಂಡಿದ್ದಾರೆ.