ದೇಶ

ಯುದ್ಧದಲ್ಲಿ ಮಹಿಳಾ ಪೈಲಟ್ ಗಳಿಗೆ ಅವಕಾಶ

Sumana Upadhyaya

ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ಇನ್ನು ಮುಂದೆ ಮಹಿಳಾ ಪೈಲಟ್ ಗಳು ಯುದ್ಧದಲ್ಲಿ ಭಾಗಿಯಾಗಲಿದ್ದಾರೆ. ರಕ್ಷಣಾ ಇಲಾಖೆ ಮಹಿಳೆಯರಿಗೆ ಯುದ್ಧ ವಿಮಾನ ಚಲಾಯಿಸಲು ಅವಕಾಶ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಭಾರತೀಯ ವಾಯುಪಡೆಯ ಎಲ್ಲಾ ವಿಭಾಗಗಳಲ್ಲಿ ಮಹಿಳೆಯರೂ ಕೂಡ ಸೇರಿದಂತಾಗುತ್ತದೆ.

ಭಾರತೀಯ ವಾಯುಪಡೆಯ ಯುದ್ಧ ವಿಭಾಗಕ್ಕೆ ಮೊದಲ ಮಹಿಳಾ ಪೈಲಟ್ ಗಳನ್ನು ಪ್ರಸ್ತುತ ವಾಯುಪಡೆಯಲ್ಲಿ ತರಬೇತಿ ಪಡೆಯುತ್ತಿರುವ ತಂಡಗಳಿಂದ ಆಯ್ಕೆ ಮಾಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಮುಂದಿನ ವರ್ಷ ಅವರನ್ನು ಯುದ್ಧ ವಿಭಾಗಕ್ಕೆ ಸೇರ್ಪಡೆ ಮಾಡಲಾಗುತ್ತದೆ.ನಂತರ ಅವರಿಗೆ ಒಂದು ವರ್ಷಗಳವರೆಗೆ ಇನ್ನೂ ಹೆಚ್ಚಿನ ತರಬೇತಿ ನೀಡಲಾಗುತ್ತಿದ್ದು, 2017 ಜೂನ್ ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ವಾಯುಪಡೆಯ ಪೈಲೆಟ್ ಗಳಾಗಲಿದ್ದಾರೆ.

83ನೇ ವಾಯುಪಡೆ ದಿನಾಚರಣೆಯಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಅರುಪ್ ರಹಾ, ಇದುವರೆಗೆ ಸಾಗಾಟ ವಿಮಾನ ಮತ್ತು ಹೆಲಿಕಾಪ್ಟರ್ ಗಳಲ್ಲಿ ಮಾತ್ರ ಮಹಿಳಾ ಪೈಲಟ್ ಗಳಿದ್ದರು. ಇನ್ನು ಮುಂದೆ ಯುದ್ಧದಲ್ಲಿಯೂ ಅವರನ್ನು ಸೇರ್ಪಡೆ ಮಾಡಲಾಗುವುದು. ಇದರಿಂದ ಯುವ ಮಹಿಳೆಯರಿಗೆ ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಉತ್ತೇಜನ ನೀಡಿದಂತಾಗುತ್ತದೆ ಎಂದರು.

ಯುದ್ಧದಲ್ಲಿ ಹೊಡೆದುರುಳಿಸಿದರೆ ಮಹಿಳಾ ಪೈಲಟ್ ಗಳಿಗೆ ತೊಂದರೆಯಾಗಬಹುದು ಎಂಬ ಭಯದಿಂದ ಯುದ್ಧದಲ್ಲಿ ಅವರಿಗೆ ಅವಕಾಶ ನೀಡುತ್ತಿರಲಿಲ್ಲ. ಪ್ರಸ್ತುತ ವಾಯುಪಡೆಯಲ್ಲಿ ಸಾವಿರದ 500 ಮಂದಿ ಮಹಿಳೆಯರಿದ್ದು, ಅವರಲ್ಲಿ 94 ಮಂದಿ ಪೈಲಟ್ ಗಳು ಮತ್ತು 14 ನಾವಿಕರಿದ್ದಾರೆ.

ಸೇನಾಪಡೆಯ ಅಲ್ಪಾವಧಿಯ ಆಯೋಗ ಮತ್ತು ಶಾಶ್ವತ ಆಯೋಗದಲ್ಲಿಯೂ  ಕೂಡ ಮಹಿಳೆಯರನ್ನು ಸೇರಿಸಿಕೊಳ್ಳುವ ಕುರಿತು ರಕ್ಷಣಾ ಇಲಾಖೆ ಸವಿಸ್ತಾರವಾದ ಪರಿಶೀಲನೆ ನಡೆಸುತ್ತಿದೆ. ಇದು ಅನುಮೋದನೆಗೊಂಡರೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮಹಿಳೆಯರಿಗೆ ಸೇನಾಪಡೆಯಲ್ಲಿ ಕೂಡ ಹೆಚ್ಚಿನ ಅವಕಾಶ ಸಿಗಲಿದೆ.

SCROLL FOR NEXT