ನವದೆಹಲಿ: ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ್ದಾರೆ.
ಭೇಟಿ ವೇಳೆ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ. ಕಾನೂನು ಸಚಿವರಲ್ಲದೇ ಇದ್ದರೂ, ಕಾನೂನಿನ ಬಗ್ಗೆ ಸ್ಪಷ್ಟ ತಿಳುವಳಿಕೆ ಹೊಂದಿರುವ ಸಚಿವರಾಗಿರುವುದರಿಂದ ರಾಷ್ಟ್ರಪತಿಗಳಿಗೆ ವಿವರಣೆ ನೀಡುವ ಜವಾಬ್ದಾರಿಯನ್ನು ಅರುಣ್ ಜೇಟ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಎನ್.ಜೆ.ಎ.ಸಿ ತೀರ್ಪಿನ ಬಗ್ಗೆ ರಾಷ್ಟ್ರಪತಿಗಳಿಗೆ ವಿಸ್ತೃತ ವಿವರಣೆ ನೀಡಿರುವ ಜೆಟ್ಲಿ ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿಗಳನ್ನು ಭೇಟಿ ಮಾಡುವುದಕ್ಕೂ ಮುನ್ನ ಎನ್.ಜೆ.ಎ.ಸಿ ಬಗ್ಗೆ ಸರ್ಕಾರದ ದೃಷ್ಟಿಕೋನವನ್ನು ಸ್ಪಷ್ಟಪಡಿಸಲು ಬ್ಲಾಗ್ ಬರೆದಿದ್ದರು.
ಜಡ್ಜ್ ಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳ ಎದುರು ಕನಿಷ್ಠ ಎರಡು ಡಜನ್ ಕಡತಗಳು ಬಾಕಿ ಇದ್ದು, ಸರ್ಕಾರದಿಂದ ಸ್ಪಷ್ಟನೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅರುಣ್ ಜೇಟ್ಲಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವರು- ರಾಷ್ಟ್ರಪತಿಗಳ ನಡುವಿನ ಭೆಟಿ ನಡೆದಿರುವುದನ್ನು ಹೊರತುಪಡಿಸಿದರೆ ಭೇಟಿಯ ಫಲಿತಾಂಶದ ಬಗ್ಗೆ ರಾಜಭವನ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.