ನವದೆಹಲಿ: ಹಲವು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಎಂಬ ಹೆಸರು ಪಡೆದಿದ್ದ ಭೂಗತ ಪಾತಕಿ ಚೋಟಾ ರಾಜನ್ ಬಂಧನವನ್ನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಧೃಡೀಕರಿಸಿದ್ದು, ಬಂಧನಕ್ಕೊಳಪಡಿಸಿದ ಇಂಡೋನೇಷ್ಯಾ ಪೊಲೀಸರಿಗೆ ಸೋಮವಾರ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಚೋಟಾ ರಾಜನ್ ಬಂಧನಕ್ಕಾಗಿ ಭಾರತೀಯ ಪೊಲೀಸರು ಹಲವು ಕಾರ್ಯಾಚರಣೆಗಳನ್ನು ನಡೆದಿದ್ದರು. ಇದೀಗ ರಾಜನ್ ಬಂಧನವಾಗಿರುವುದು ಸಂತಸ ತಂದಿದೆ. ರಾಜನ್ ಕುರಿತ ತನಿಖೆಯನ್ನು ನಡೆಸಲಾಗುತ್ತದೆ. ರಾಜನ್ ಬಂಧನಕ್ಕೆ ಸಹಾಯ ಮಾಡಿದ ಇಂಡೋನೇಷ್ಯಾ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ರಾಜನ್ ಬಂಧನ ಕುರಿತಂತೆ ಈಗಾಗಲೇ ಸಿಬಿಐ ನಿರ್ದೇಶಕ ಅನಿಲ್ ಸಿನ್ಹಾ ಸಹ ಧೃಡೀಕರಿಸಿದ್ದು, ಸಿಡ್ನಿಯಿಂದ ಬಲಿ ಬೀಚ್ ರೆಸಾರ್ಟ್ ಗೆ ರಾಜನ್ ಆಗಮಿಸಿದ್ದ ಸಂದರ್ಭದಲ್ಲಿ ಇಂಡೋನೇಷ್ಯಾ ಪೊಲೀಸರು ಕಾರ್ಯಾಚರಣೆ ನಡೆಸಿ ಭೂಗತ ಪಾತಕಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ಹೇಳಿದ್ದಾರೆ.
ಹಲವು ಪಾತಕೀಯ ಕೃತ್ಯದಲ್ಲಿ ಭಾಗಿಯಾಗಿದ್ದ ರಾಜನ್ ನೂರಾರು ಹತ್ಯಾ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ. ಬಂಧನಕ್ಕೆ ಹೆದರಿದ್ದ ಚೋಟಾರಾಜನ್ ವಿದೇಶಕ್ಕೆ ಹಾರಿದ್ದ. ಹೀಗಾಗಿ ರಾಜನ್ ನ್ನು ಬಂಧಿಸಲು 1995ರಲ್ಲಿ ಕೇಂದ್ರ ಸರ್ಕಾರ ಮತ್ತು ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಮಾಡಿತ್ತು. ಇದಾಗ್ಯೂ ವೇಷಧಾರಿಯಾಗಿ ತಲೆಮರೆಸಿಕೊಂಡಿದ್ದ ಚೋಟಾ ರಾಜನ್ ನಾನಾ ದೇಶಗಳಿಗೆ ಪರಾರಿಯಾಗುತ್ತಿದ್ದ. ಇದೀಗ ಚೋಟಾ ರಾಜನ್ ನ್ನು ಇಂಡೋನೇಷ್ಯಾ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.