ಜಕಾರ್ತ: ನೂರಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಭಾರತೀಯ ಪೊಲೀಸರಿಂದ ರೆಡ್ ಕಾರ್ನರ್ ನೊಟಿಸ್ ಪಡೆದಿದ್ದ ಭೂಗತ ಪಾತಕಿ ಚೋಟಾ ರಾಜನ್ ನನ್ನು ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಡ್ನಿಯಿಂದ ಬಾಲಿ ಬೀಚ್ ರೆಸಾರ್ಟ್ ಗೆ ರಾಜನ್ ಆಗಮಿಸಿರುವ ಕುರಿತು ಮಾಹಿತಿ ಪಡೆದ ಇಂಡೋನೇಷ್ಯಾ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ 55 ವರ್ಷದ ಭೂಗತ ಪಾತಕಿ ಛೋಟಾ ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ ನಿಖಲ್ಜೆಯನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ರಾಜನ್ ತನ್ನ ಹಿಂಬಾಲಕರೊಂದಿಗೆ ಸಿಡ್ನಿಯಿಂದ ಬಾಲಿ ಬೀಚ್ ರೆಸಾರ್ಟ್ ಗೆ ಆಗಮಿಸಿದ್ದನು. ಕೂಡಲೇ ಕಾರ್ಯಾಚರಣೆ ನಡೆಸಿದ ಇಂಡೋನೇಷ್ಯಾ ಪೊಲೀಸರು ರಾಜನ್ ವಿಮಾನ ನಿಲ್ದಾಣಕ್ಕೆ ಬಂದಿರುವುದನ್ನು ಖಚಿತ ಪಡಿಸಿಕೊಂಡು ನಿಲ್ದಾಣವನ್ನು ಸುತ್ತುವರೆದು ಆತನನ್ನು ಬಂಧಿಸಿದ್ದಾರೆ ಎಂದು ಕ್ಯಾನ್ ಬೆರ್ರಾ ಪೊಲೀಸ್ ವಕ್ತಾರ ಹೆರಿ ವಿಯಾಂಟೋ ತಿಳಿಸಿದ್ದಾರೆ.
"ಭಾರತದಿಂದ ರೆಡ್ ಕಾರ್ನರ್ ನೋಟಿಸ್ ಪಡೆದಿರುವ ವ್ಯಕ್ತಿ ಬಾಲಿ ಬೀಚ್ ರೆಸಾರ್ಟ್ ಗೆ ತೆರಳಿರುವ ಕುರಿತು ಕ್ಯಾನ್ ಬೆರ್ರಾ ಪೊಲೀಸರಿಗೆ ಮಾಹಿತಿ ಬಂದಿತ್ತು. ಇದರ ಅನ್ವಯ ನಿನ್ನೆ ಕಾರ್ಯಾಚರಣೆ ನಡೆಸಿ ರಾಜನ್ ನನ್ನು ಬಾಲಿ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲಾಗಿದೆ. ನಮಗೆ ಬಂದ ಮಾಹಿತಿಗಳ ಪ್ರಕಾರ ಈತನ ಮೇಲೆ ಭಾರತದಲ್ಲಿ 15ರಿಂದ 20 ಕೊಲೆ ಪ್ರಕರಣಗಳ ದಾಖಲಾಗಿವೆ ಎಂದು ವಿಯಾಂಟೋ ತಿಳಿಸಿದ್ದಾರೆ.
ವಿವಿಧ ಪಾತಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ರಾಜನ್ ನೂರಾರು ಹತ್ಯಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಭಾರತದ ಪೊಲೀಸರಿಗೆ ಹೆದರಿ ವಿದೇಶಕ್ಕೆ ಹಾರಿದ್ದ ಛೋಟಾರಾಜನ್ ನನ್ನು ಬಂಧಿಸಿಲು 1995ರಲ್ಲಿ ಕೇಂದ್ರ ಸರ್ಕಾರ ಮತ್ತು ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಇದಾಗ್ಯೂ ವಿವಿಧ ವೇಷ ಧರಿಸಿ ತಲೆಮರೆಸಿಕೊಂಡಿದ್ದ ರಾಜನ್ ನಾನಾ ದೇಶಗಳಿಗೆ ಪರಾರಿಯಾಗುತ್ತಿದ್ದ. ಇದೀಗ ಈತನನ್ನು ಸಿಡ್ನಿ ಪೊಲೀಸರ ಸಹಾಯದಿಂದ ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದಾರೆ.