ದೇಶ

ಲಂಕಾ ಸೇನೆಯಿಂದ 34 ಭಾರತೀಯ ಮೀನುಗಾರರ ಬಂಧನ

Srinivasamurthy VN

ರಾಮೇಶ್ವರಂ: ಸಮುದ್ರ ಗಡಿ ಉಲ್ಲಂಘನೆ ಮಾಡಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ 34 ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಮಂಗಳವಾರ ಬಂಧಿಸಿದೆ.

ಶ್ರೀಲಂಕಾದ ಮನ್ನಾರ್ ಸಮುದ್ರ ಗಡಿ ಪ್ರದೇಶದಲ್ಲಿ 11 ಮಂದಿಯನ್ನು ಮತ್ತು ನೆಡುಂಥೀವು ಪ್ರದೇಶದಲ್ಲಿ 23 ಮಂದಿ ಮೀನುಗಾರರನ್ನು ಬಂಧಿಸಿದ್ದು, ಬಂಧಿತರಿಂದ 7 ಬೋಟ್ ಗಳನ್ನು ಮತ್ತು  ಮೀನುಗಾರಿಕಾ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಬಂಧಿತರನ್ನು ತಮಿಳುನಾಡಿನ ರಾಮನಾಥಪುರಂ, ರಾಮೇಶ್ವರಂ, ನಾಗಪಟ್ಟಣದ ನಿವಾಸಿಗಳೆಂದು  ತಿಳಿದುಬಂದಿದ್ದು, ರಾಮೇಶ್ವರಂನಿಂದ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಇವರು ಶ್ರೀಲಂಕಾ ವ್ಯಾಪ್ತಿಗೆ ಸೇರಿದ ಗಡಿಯಲ್ಲಿ ಮೀನು ಹಿಡಿಯಲು ಮುಂದಾಗಿದ್ದರು ಎಂಬ ಆರೋಪವನ್ನು  ಶ್ರೀಲಂಕಾದ ನೌಕಾಪಡೆ ಅಧಿಕಾರಿಗಳು ಹೊರಿಸಿದ್ದಾರೆ.

ಪದೇ ಪದೇ ಸಮುದ್ರ ಗಡಿ ಉಲ್ಲಂಘನೆ ಮಾಡಿ ಮೀನುಗಾರಿ ಮಾಡುತ್ತಿರುವ ಕಾರಣ ನಾವು ಮೀನುಗಾರರನ್ನು ಬಂಧಿಸಿದ್ದೇವೆ. 34 ಮಂದಿ ಜೊತೆಗೆ ಏಳು ದೋಣಿಗಳನ್ನು ವಶಕ್ಕೆ  ತೆಗೆದುಕೊಳ್ಳಲಾಗಿದೆ ಎಂದು ಶ್ರೀಲಂಕಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ಶ್ರೀಲಂಕಾದ ಜೈಲಿನಲ್ಲಿ ತಮಿಳುನಾಡಿನ 86 ಮಂದಿ ಮೀನುಗಾರರಿದ್ದು, ಕಳೆದ ಕೆಲ ದಿನಗಳ ಹಿಂದೆ ಇದೇ ಆರೋಪದ ಮೇಲೆ ಕೆಲ ಮೀನುಗಾರರನ್ನು ಬಂಧಿಸಿದ್ದಾಗ ತಮಿಳುನಾಡಿನ  ಮುಖ್ಯಮಂತ್ರಿ ಜಯಲಲಿತಾ ಅವರು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಒತ್ತಡ ಹಾಕಿದ್ದರು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಧ್ಯಪ್ರವೇಶಿಸಿ ಕೆಲ  ಮೀನುಗಾರರನ್ನು ಬಂಧ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

SCROLL FOR NEXT