ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ
ನವದೆಹಲಿ/ ತಿರುವನಂತಪುರಂ: ದೇಶದ ರಾಜಧಾನಿಯಲ್ಲಿರುವ ಕೇರಳ ಹೌಸ್ ಕ್ಯಾಂಟೀನ್‌ನಲ್ಲಿ ಬೀಫ್ ಬಡಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ದಾಳಿ ನಡೆಸಿ ಪರಿಶೋಧನೆ ನಡೆಸಿದ್ದಕ್ಕೆ ಕೇರಳ ಸಿಎಂ ಉಮ್ಮನ್ ಚಾಂಡಿ ಗರಂ ಆಗಿದ್ದಾರೆ.
ಬಲಪಂಥೀಯ ಸಂಘಟನೆಯೊಂದರ ನಾಯಕ ಫೋನಾಯಿಸಿ ಕೇರಳ ಹೌಸ್‌ನಲ್ಲಿ ಬೀಫ್ ಪದಾರ್ಥ ಮಾಡಲಾಗಿದೆ ಎಂದು ದೆಹಲಿ ಪೊಲೀಸರಿಗೆ ದೂರಿದ್ದನು. ಇದನ್ನು ಕೇಳಿದ ಕೂಡಲೇ ದೆಹಲಿ ಪೊಲೀಸರು ಕೇರಳ ಹೌಸ್‌ಗೆ ಬಂದು ಪರಿಶೋಧನೆ ನಡೆಸಿದ್ದರು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಪೊಲೀಸರು ದಾಳಿ ನಡೆಸುವ ಮುನ್ನ ಯೋಚನೆ ಮಾಡಬೇಕಿತ್ತು ಎಂದಿದ್ದಾರೆ.
ಕೇರಳ ಹೌಸ್ ಎಂಬುದು ರಾಜ್ಯದ ಅತಿಥಿ ಗೃಹವೇನೂ ಅಲ್ಲ. ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ಸಿಗಲಿಲ್ಲ. ಆದರೆ, ದೆಹಲಿ ಪೊಲೀಸರು ದಾಳಿ ನಡೆಸುವ ಮುನ್ನ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಬೇಕಿತ್ತು ಎಂದು ಕೋಝಿಕ್ಕೋಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾಂಡಿ ಹೇಳಿದ್ದಾರೆ.
ಈ ವಿಷಯದ ಬಗ್ಗೆ ತಾವು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದೇವೆ ಎಂದು ಚಾಂಡಿ ಹೇಳಿದ್ದಾರೆ.
ಕೇರಳ ಹೌಸ್‌ನ ಮೇಲೆ ದೆಹಲಿ ಪೊಲೀಸರು ದಾಳಿ ಮಾಡುವಂತದ್ದೇನಿತ್ತು? ಬೀಫ್ (ಎತ್ತಿನ ಮಾಂಸ)ವನ್ನು ದೆಹಲಿಯಲ್ಲಿ ನಿಷೇಧ ಮಾಡಿಲ್ಲ ಎಂದು ಕೇರಳದ ಸಂಸದ ರಾಜೇಶ್ ಹೇಳಿದ್ದಾರೆ.
ಪೊಲೀಸರ ದಾಳಿ ಹಿನ್ನೆಲೆಯಲ್ಲಿ ಕೇರಳ ಹೌಸ್ ಮೆನುವಿನಲ್ಲಿ ಬೀಫ್ ಭಕ್ಷ್ಯವನ್ನು ಕೈ ಬಿಡಲಾಗಿತ್ತು.