ಬೆಂಗಳೂರು: ಸಂಪುಟ ಪುನಾರಚನೆ ದುಸ್ಸಾಹಸಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯಗೆ ನೀಡಿದೆ. ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಅಥವಾ ಯಥಾಸ್ಥಿತಿ ಪಾಲನೆಯೋ ಎಂಬ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ನಾಯಕತ್ವದ ಮಧ್ಯೆ ಮಂಗಳವಾರ ಮಧ್ಯಾಹ್ನದವರೆಗೂ ಸ್ಪಷ್ಟತೆ ಮೂಡಿರಲಿಲ್ಲ.
ಆದರೆ ಅಂತಿಮವಾಗಿ ಪುನಾರಚನೆ ಬೇಡವೇ ಬೇಡ ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ. ಹೀಗಾಗಿ ಬಿಟ್ಟ ಸ್ಥಳ ಭರ್ತಿಗಾದರೂ ಅವಕಾಶ ನೀಡಿ ಎಂದು ವರಿಷ್ಠರ ಮನವೊಲಿಸಲು ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲೇ ಇದ್ದಾರೆ. ಬೆಂಗಳೂರಿನಿಂದ ದೆಹಲಿಗೆ ತೆರಳುವಾಗ ಮುಖ್ಯಮಂತ್ರಿ ಹೊಂದಿದ್ದ ಎಲ್ಲ ಲೆಕ್ಕಾಚಾರಗಳೂ ಈಗ ತಲೆ ಕೆಳಗಾಗಿದ್ದು, ಪುನಾರಚನೆ ಬೇಡ ಎಂದು ಸಿದ್ದರಾಮಯ್ಯ ವಿರೋಧಿ ಬಣ ನೀಡಿದ್ದ ಅಭಿಪ್ರಾಯಕ್ಕೆ ಹೈಕಮಾಂಡ್ ಮನ್ನಣೆ ನೀಡಿದೆ.
ಆದಾ-ಗಿಯೂ ಎ.ಮಂಜು, ವಿನಯ್ ಕುಲಕರ್ಣಿ ಮತ್ತು ಕಾಗೋಡು ತಿಮ್ಮಪ್ಪರನ್ನಾದರೂ ಸಂಪುಟಕ್ಕೆ ಸೇರಿಸಿಕೊಳ್ಳಲು ಅನುಮತಿ ನೀಡಿ ಎಂದು ವರಿಷ್ಠರನ್ನು ಒಪ್ಪಿಸಲು ಸಿದ್ದರಾ-ಮಯ್ಯ ಪ್ರಯತ್ನ ನಡೆಸಿದ್ದಾರೆ. ಬುಧವಾರ ಸಾಯಂಕಾಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಜತೆಗಿನ ಚರ್ಚೆ ಬಳಿಕ ಈ ವಿಚಾರ ಅಂತಿಮವಾಗುತ್ತದೆ.
ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ವಿಚಾರವೂ ನೆನೆಗುದಿಗೆ ಬಿದ್ದಿದೆ. ತಮಗೆ ಅಡ್ಡಿಯನ್ನುಂಟು ಮಾಡುವ ಡಾ.ಜಿ.ಪರಮೇಶ್ವರರನ್ನು ಸಂಪುಟಕ್ಕೆ ಸೇರಿಸಿಕೊಂಡು ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್ ಅವರಿಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪಟ್ಟ-ಕಟ್ಟಬೇಕೆಂಬ ಸಿದ್ದರಾಮಯ್ಯ ಪ್ರಯತ್ನಕ್ಕೂ ಹಿನ್ನಡೆಯಾಗಿದೆ.
ಕೇವಲ ಸಚಿವರಾಗಿ ಸಂಪುಟ ಸೇರುವುದಕ್ಕೆ ಪರಮೇಶ್ವರ ನಿರಾಕರಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ರಾಜಕೀಯವಾಗಿ ಅವರಿಗೆ ಯಾವುದೇ ಮೇಲುಗೈ ಸಾಧನೆಗೆ ಅವಕಾಶ ನೀಡಿಲ್ಲ. ದೆಹಲಿ ಮೂಲಗಳ ಪ್ರಕಾರ ಸಂಪುಟ ಪುನಾರಚನೆ ಕಸರತ್ತು ಅಂತಿಮ ಹಂತ ತಲುಪಿದ್ದು ಹೈಕಮಾಂಡ್ ಅನುಮೋದನೆ ಬಾಕಿ ಇದೆ ಎಂಬ ಸುದ್ದಿಗಳು ದೆಹಲಿಯಲ್ಲಿ ದಟ್ಟವಾಗಿ ಹರಿದಾಡುತ್ತಿವೆ.
ಆದರೆ ಇದನ್ನು ಯಾವ ಮೂಲಗಳು ಸ್ಪಷ್ಟಪಡಿಸಿಲ್ಲ. ದಿಗ್ವಿಜಯ್ ಸಿಂಗ್ ಜತೆಗೆ ಸಿದ್ದರಾಮಯ್ಯಯ್ಯ 45 ನಿಮಿಷಗಳ ಕಾಲ ಸೋನಿಯಾ ಜತೆ ಚರ್ಚೆ ನಡೆಸಿದರೂ ಸ್ಪಷ್ಟ ಚಿತ್ರಣ ಹೊರಬಿದ್ದಿಲ್ಲ. ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಪಟ್ಟಿಯನ್ನು ನೀಡಿದರೆಂದು ಗೊತ್ತಾಗಿದೆ. ಆದರೆ ಆ ಪಟ್ಟಿ ಬಗ್ಗೆ ಗೊಂದಲ ಮೂಡಿದ್ದರಿಂದ ಅಂತಿಮ ನಿರ್ಧಾರ ಕೈಗೊಳ್ಳಲಿಲ್ಲ ಎನ್ನಲಾಗಿದೆ.
ಸೋನಿಯಾರನ್ನು ಭೇಟಿ ಮಾಡಿ ಹೊರ ಬಂದ ಸಿಎಂ , ಸಂಪುಟ ಪುನಾರಚನೆ ಸೇರಿಹಲವು ವಿಷಯಗಳ ಬಗ್ಗೆ ಸೋನಿಯಾ ಅವರೊಂದಿಗೆ ಚರ್ಚಿಸಿದ್ದೇನೆ. ಬುಧವಾರ ದಿಗ್ವಿಜಯ್ ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಖರ್ಗೆ ಮಾತಿಗೆ ಮನ್ನಣೆ:
ಸಂಪುಟ ಪುನಾರಚನೆ ಸಂಬಂಧ ಸಿದ್ದರಾಮಯ್ಯ ಜತೆ ಚರ್ಚೆ ನಡೆಸುವುದಕ್ಕೆ ಮುನ್ನ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿ. ಕೆ.ಹರಿಪ್ರಸಾದ್, ಎಸ್.ಎಂ.ಕೃಷ್ಣರಿಂದ ಸೋನಿಯಾ ಮಾಹಿತಿ ತೆಗೆದುಕೊಂಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ವಿಧಾನ ಪರಿಷತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಕ್ತಾಯವಾಗುವವರೆಗೆ ಸಂಪುಟ ಪುನಾರಚನೆ ಬೇಡ ಎಂದು ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಅಭಿಪ್ರಾಯಕ್ಕೆ ಸೋನಿಯಾ ಗಾಂಧಿ ಮನ್ನಣೆ ನೀಡಿದ್ದಾರೆ.
ಇದರ ಜತೆಗೆ ಬುಧವಾರ ಈ ಸಂಬಂಧ ಚರ್ಚೆ ನಡೆಸುವುದಕ್ಕೆ ಆಗಮಿಸುವಂತೆ ಸೋನಿಯಾ ಅವರು ಖರ್ಗೆ ಅವರಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ ಸಿಎಂ ಇನ್ನೂ ಒಂದು ದಿನ ದೆಹಲಿಯಲ್ಲಿ ವರಿಷ್ಠರನ್ನು ಒಲಿಸುವುದಕ್ಕೆ ಪ್ರಯತ್ನ ನಡೆಸುವುದು ಅನಿವಾರ್ಯವಾಗಿ ದ್ದು, ತೀರಾ ಒತ್ತಡದ ಪರಿಸ್ಥಿತಿ ನಿರ್ಮಾಣವಾದರೆ ಕಿರು ವಿಸ್ತರಣೆಗೆ ಮಾತ್ರ ಹಸಿರು ನಿಶಾನೆ ತೋರಬಹುದು. ಆದರೆ ಕೆಪಿಸಿಸಿ ಅಧ್ಯಕ್ಷರ ವಿಚಾರ ಮಾತ್ರ ಇನ್ನೂ ಜೀವಂತವಾಗಿರುತ್ತದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಹಿನ್ನಡೆಯೇ?
ದೆಹಲಿಯಲ್ಲಿ ನಡೆದಿರುವ ವಿದ್ಯಮಾನಗಳು ಸಿಎಂಗೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಹಾಗೆಂದು ಪರಮೇಶ್ವರ ಪ್ರಯತ್ನಕ್ಕೂ ಹೈಕಮಾಂಡ್ ನಿಂದ ಸಕಾರಾತ ನೇಮಕ ಫಲ ಸಿಕ್ಕಿಲ್ಲ. ಅವರಿಗೆ ಡಿಸಿಎಂ ಸ್ಥಾನ ನೀಡುವ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಕೇವಲ ಸಚಿವರಾಗಿ ಸಂಪುಟ ಸೇರುವುದಕ್ಕೆ ಒಪ್ಪಿಗೆ ನೀಡಿಲ್ಲ.
4 ಅಂಶದ ಸುತ್ತ ಗಿರಕಿ
ಸಂಪುಟ ಪುನಾರಚನೆ ನಡೆಸುವುದರಿಂದ ತಮ್ಮ ಕೈ ಬಲಗೊಳ್ಳುತ್ತದೆ ಜತೆಗೆ ಆಡಳಿತಕ್ಕೂ ಚುರುಕು ನೀಡಬಹುದೆಂಬ ಉದ್ದೇಶವನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ
ದಿಗ್ವಿಜಯï ಸಿಂಗ್ ಅವರ ಜತೆಗಿನ ಚರ್ಚೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದರು. ಆದರೆ ಈ ಸಂದರ್ಭದಲ್ಲಿ ನಾಲ್ಕು ಅಂಶಗಳು ಪ್ರಧಾನವಾಗಿ ಚರ್ಚೆಗೆ ಬಂದವು. ಈಗಾಗಲೇ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದೆ. ಉಳಿದ ಅವ„ಯನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕು.
ಹೀಗಾಗಿ ಅಸಮರ್ಥತೆಯನ್ನು ಯಾವ ಮಾನದಂಡದಿಂದ ಅಳತೆ ಮಾಡಿದ್ದೀರಿ ? ಅಸಮರ್ಥರ ಜತೆಗೆ ಭ್ರಷ್ಟರನ್ನೂ ಸಂಪುಟದಿಂದ ಕೈ ಬಿಡಬೇಕೇ ? ಬೇಡವೇ ?, ಯಾವುದೂ ಬೇಡ ಎಂದಾದರೆ ಇನ್ನು ಕೆಲ ಈಗಿರುವವರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಲು ಸಾಧ್ಯವಿಲ್ಲವೇ ? ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಭವಿಷ್ಯವನ್ನು ನಿರ್ಧರಿಸದೇ ನಿರ್ಣಯ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸೂಕ್ತ ? ಎಂಬ ವಿಚಾರಗಳು ಚರ್ಚೆಗೆ ಬಂದಿವೆ.