ಮುಂಬೈ: ಶೀನಾಬೋರಾ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಇಂದ್ರಾಣಿ ಮುಖರ್ಜಿ ಜ್ವರ ಮತ್ತು ಸಂಧೀವಾತದಿಂದ ಬಳಲುತ್ತಿದ್ದು, ಇಂದು ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ರಕ್ತ ಪರೀಕ್ಷೆ ವರದಿಯಲ್ಲಿ ಇಂದ್ರಾಣಿ ಮುಖರ್ಜಿ ಅವರ ರಕ್ತದಲ್ಲಿನ ಪ್ಲೇಟ್ಲೇಟ್ ಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, 65 ಸಾವಿರಕ್ಕೆ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ವೈದ್ಯರು ಇಂದ್ರಾಣಿ ಮುಖರ್ಜಿಗೆ ಬೈಕುಲಾದಲ್ಲಿರುವ ಜೈಲಿನಲ್ಲಿಯೇ ಚಿಕಿತ್ಸೆ ನೀಡುತ್ತಿದ್ದು, ಅಗತ್ಯ ಬಿದ್ದರೆ ಜೆಜೆ ಆಸ್ಪತ್ರೆಗೆ ದಾಖಲಿಸುವುದಾಗಿ ಹೇಳಿದ್ದಾರೆ.
ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೂ ಪೊಲೀಸರು ಮಾಹಿತಿ ನೀಡಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಆರ್ ವಿ ಅಡೋನ್ ಅವರು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದಾರೆ. ಇನ್ನು ಶೀನಾ ಬೋರಾ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇಂದ್ರಾಣಿ ಮುಖರ್ಜಿ ಅವರ ಹೇಳಿಕೆ ದಾಖಲಿಸಲು ಮುಂದಾಗಿದ್ದರು. ಇಂದ್ರಾಣಿ ಅವರ ದೂರವಾಣಿ ಸಂಭಾಷಣೆಯಲ್ಲಿನ ಧ್ವನಿ ಪರೀಕ್ಷೆಗೂ ಅಧಿಕಾರಿಗಳು ಅವರ ಮಾದರಿ ಧ್ವನಿ ಸಂಗ್ರಹಿಸಲು ಮುಂದಾಗಿದ್ದರು. ಆದರೆ ಪ್ರಸ್ತುತ ಅವರು ಜ್ವರದಿಂದ ಬಳಲುತ್ತಿರುವ ಕಾರಣ ಸಿಬಿಐ ಅಧಿಕಾರಿಗಳ ತನಿಖೆಗೆ ಹಿನ್ನಡೆಯಾಗಿದೆ.
ಇದೇ ಅಕ್ಟೋಬರ್ 31ಕ್ಕೆ ಇಂದ್ರಾಣಿ ಮುಖರ್ಜಿ, ಅವರ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ವರ್ ಅವರ ಬಂಧನದ ಅವಧಿ ಮುಕ್ತಾಯಗೊಳ್ಳಲ್ಲಿದ್ದು, ಈ ಅವಧಿಯೊಳಗೇ ಸಿಬಿಐ ಅಧಿಕಾರಿಗಳು ಧ್ವನಿ ಮಾದರಿ ಸಂಗ್ರಹಕ್ಕೆ ಮುಂದಾಗಿದ್ದರು. ಕಳೆದ ಆಕ್ಟೋಬರ್ 19 ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ಈ ಮೂವರು ಆರೋಪಿಗಳನ್ನು ಅಕ್ಟೋಬರ್ 31ರವರೆಗೆ ಕಸ್ಟಡಿಗೆ ನೀಡಿತ್ತು. ಅಕ್ಟೋಬರ್ 31ಕ್ಕೆ ಈ ಮೂವರ ಬಂಧನ ಮುಕ್ತಾಯಗೊಳ್ಳುವುದರಿಂದ ಸಿಬಿಐ ತನಿಖೆ ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ.