ದೇಶ

ಸಚಿವ ಮಹೇಶ್ ಶರ್ಮಾಗೆ ಅಬ್ದುಲ್ ಕಲಾಂ ಮನೆ

Shilpa D

ನವದೆಹಲಿ: ಕೇಂದ್ರ ಸಂಸ್ಕೃತಿ ಖಾತೆ ಸಹಾಯಕ ಸಚಿವ ಮಹೇಶ್ ಶರ್ಮಾ ಅವರ ಅದೃಷ್ಟ ಖುಲಾಯಿಸಿದೆ. ಏಕೆಂದರೆ ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಅವರು ವಾಸವಿದ್ದ ದೆಹಲಿಯ ಪ್ರತಿಷ್ಠಿತ ಎಡ್ವಿನ್ ಲೂಟೆನ್ಸ್ ಬಂಗಲೆಯನ್ನು ಶರ್ಮಾ ಅವರಿಗೆ ಕೇಂದ್ರ ಸರ್ಕಾರ ನೀಡಿದೆ.

ಸದಾ ಒಂದಿಲ್ಲೊಂದು ವಿವಾದಾತ್ಮಕ  ಹೇಳಿಕೆ ನೀಡುತ್ತಿದ್ದ ಮಹೇಶ್ ಶರ್ಮಾ ಕಲಾಂ ಅವರ ಬಗ್ಗೆಯು ಹೇಳಿಕೆ ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ''ಮುಸ್ಲಿಮರಾಗಿದ್ದರೂ ಡಾ. ಕಲಾಂ ಮಹಾನ್ ರಾಷ್ಟ್ರೀಯವಾದಿಯಾಗಿದ್ದರು,'' ಎಂದು ಹೇಳಿದ್ದ ಅದೇ ಶರ್ಮಾಗೆ ಕಲಾಂ ವಾಸಿಸಿದ್ದ ಮನೆಯನ್ನು ಅಲಾಟ್ ಮಾಡಿರುವುದು ಮತ್ತೊಂದು  ವಿವಾದಕ್ಕೆ ನಾಂದಿ ಹಾಡಿದೆ.

ವಿಶೇಷವೆಂದರೆ ಎರಡು ಮಹಡಿಯ ಈ ಮನೆ 1,094 ಚದರ ಮೀಟರ್ ಅಂದರೆ 11,776 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಇಷ್ಟು ದೊಡ್ಡ ಬಂಗಲೆ ಸಂಪುಟ ಸಚಿವರಾದ ರಾಜನಾಥ್, ಜೇಟ್ಲಿ, ಸುಷ್ಮಾ ಸ್ವರಾಜ್‌ರಂಥ ಹಿರಿಯರಿಗೂ ಇಲ್ಲ. ಮೊದಲ ಬಾರಿಗೆ ಸಂಸದರಾಗಿರುವ ಶರ್ಮಾಗೆ ಕೇಂದ್ರ ಸಚಿವ ಹುದ್ದೆ ಅದರಲ್ಲೂ ಸ್ವತಂತ್ರ ಖಾತೆ ಸಿಕ್ಕಿರುವುದೇ ಅಚ್ಚರಿಗೆ ಕಾರಣವಾಗಿತ್ತು. ಈಗ ಇನ್ನೊಂದು ಜಾಕ್‌ಫಾಟ್ ಹೊಡೆದಿದೆ.

ಇನ್ನು ಅಬ್ದುಲ್ ಕಲಾಂ ವಾಸವಿದ್ದ ಮನೆಯನ್ನು ಮಹೇಶ್ ಶರ್ಮಾ ಅವರಿಗೆ ಅಲಾಟ್ ಮಾಡಿರುವುದಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ. ಕಲಾಂ ಅವರಂಥ ಮಹಾನ್ ವ್ಯಕ್ತಿ ವಾಸವಿದ್ದ ಮನೆಯನ್ನು ಮಹೇಶ್ ಶರ್ಮಾ ಅವರಿಗೆ ನೀಡಿರುವುದು ಸರಿಯಲ್ಲ. ಕಲಾಂ ಅವರಂಥ ಅಧ್ಬುತ ಚೇತನ ವಾಸವಿದ್ದ ಮನೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಎಎಪಿ ಆಗ್ರಹಿಸಿದೆ. ಇನ್ನು ಕಲಾಂ ಅವರ ಪುಸ್ತಕ ಹಾಗೂ ದಾಖಲೆಗಳನ್ನು ರಾಮೇಶ್ವರಂಗೆ ಸ್ಥಳಾಂತರಿಸಿರುವುದು ಕಲಾಂ ಅವರಿಗೆ ಮಾಡಿರುವ ಬಹುದೊಡ್ಡ ಅವಮಾನ ಆಪ್ ಆರೋಪಿಸಿದೆ.

ಸಮರ್ಥನೆ

ಮಹೇಶ್ ಶರ್ಮಾಗೆ ದಿಲ್ಲಿಯಲ್ಲಿ ಮನೆಯೇ ಇರಲಿಲ್ಲ. ಸಚಿವರ ಕೋಟಾದಲ್ಲಿ ಅವರಿಗೆ ಇದುವರೆಗೆ ಮನೆ ಮಂಜೂರು ಆಗಿರಲಿಲ್ಲ. ನೋಯ್ಡಾದಲ್ಲಿರುವ ಸ್ವಂತ ಮನೆಯಿಂದಲೇ ಅವರು ಓಡಾಡುತ್ತಿದ್ದರು. ಹೀಗಾಗಿ ಅವರಿಗೆ ಕಲಾಂ ಅವರು ವಾಸವಿದ್ದ ಮನೆಯನ್ನು ನೀಡಲಾಗಿದೆ ಎಂದು ಕೇಂದ್ರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

SCROLL FOR NEXT