ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮಧ್ಯೆ ಭಿನ್ನಾಭಿಪ್ರಾಯಗಳುಂಟಾಗಿರುವ ಮಧ್ಯೆಯೇ ತಮ್ಮ ಸರ್ಕಾರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶನಿವಾರ ಹೇಳಿದ್ದಾರೆ
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ಮೈತ್ರಿ ಸರ್ಕಾರ ಜೊತೆಗೆ ಸಾಗಲಿದೆ. ಮುಂದಿನ ದಿನಗಳಲ್ಲಿ ಮುಂಬೈನ ಸ್ಥಳೀಯ ಚುನಾವಣೆಗಳಲ್ಲೂ ಮೈತ್ರಿ ಪಕ್ಷಗಳು ಸ್ಪರ್ಥಿಸಲಿದೆ. ನಮ್ಮ ಸರ್ಕಾರ ಅಧಿಕಾರವನ್ನು ಪೂರ್ಣಗೊಳಿಸಲಿದ್ದು, ಸರ್ಕಾರ ಅಂತ್ಯಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಗುಲಾಂ ಅಲಿ ಕಾರ್ಯಕ್ರಮ ವಿರೋಧಿಸಿ ಶಿವಸೇನೆ ಪ್ರತಿಭಟನೆ ನಡೆಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಅವರು, ಗುಲಾಂ ಅಲಿಯವರೊಬ್ಬ ಕಲಾವಿದರಾಗಿದ್ದು, ಅವರನ್ನು ಯಾವುದೋ ದೇಶ ಅಥವಾ ಧರ್ಮಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಈಗಾಗಲೇ ಶಿವಸೇನೆಗೆ ಹೇಳಲಾಗಿದೆ. ಗುಲಾಂ ಅಲಿ ಎಂದಾದರೂ ಭಾರತದ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆಯೇ? ಜಗ್ಜಿತ್ ಸಿಂಗ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅವರಿಗೆ ಭದ್ರತೆಯೊದಗಿಸಿದಾಕ್ಷಣ ನಾವು ಪಾಕಿಸ್ತಾನಿಗಳಾಗುವುದಿಲ್ಲ ಎಂದು ಹೇಳಿದ್ದಾರೆ.
ಮೈತ್ರಿ ಪಕ್ಷಗಳಲ್ಲಿ ಕೆಲವು ವಿಷಯಗಳಲ್ಲಿ ಪರ ಹಾಗೂ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿರುತ್ತದೆ. ಇದರಿಂದಾಗಿ ಪಕ್ಷದಲ್ಲಿ ಜಗಳವಾಗುವುದು ಸಹಜ. ಆದರೆ, ಇದೀಗ ಎರಡು ಪಕ್ಷಗಳು ಈ ಬಗ್ಗೆ ಅರ್ಥ ಮಾಡಿಕೊಂಡಿದ್ದು, ನಮ್ಮ ಸರ್ಕಾರ ಅಧಿಕಾರವನ್ನು ಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ.