ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಸೂದೆ ಜಾರಿಗೆ ಕಾಂಗ್ರೆಸ್ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಆದರೆ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಬಹುಮತ ಹೊಂದಿರುವುದನ್ನು ಬಳಕೆ ಮಾಡಿಕೊಂಡು ಕಲಾಪಕ್ಕೆ ಅಡ್ಡಿ ಮಾಡುವುದು ಮಸೂದೆ ಜಾರಿಗೆ ಪ್ರತಿರೋಧ ಒಡ್ಡುವುದು ನೋವಿನ ವಿಷಯವಾಗಿದೆ. ಈ ದೇಶವನ್ನು ಆಳಲು ತನಗೆ ಅರ್ಹತೆ ಇದೆಯೇ ಎಂಬುದನ್ನು ಕಾಂಗ್ರೆಸ್ ತನ್ನಿಂತಾನೆ ಪ್ರಶ್ನಿಸಿಕೊಳ್ಳಬೇಕು ಎಂದಿದ್ದಾರೆ. ಆದರೂ ಈ ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆಯಲು ಸರ್ಕಾರ ಬದ್ಧವಾಗಿದೆ. ಮುಂದಿನ ವರ್ಷದ ಏಪ್ರಿಲ್‍ನಿಂದ ಜಿಎಸ್‍ಟಿ ಜಾರಿಗೆ ಪೂರಕವಾದ 3 ಮಸೂದೆಗಳು ಸಿದ್ಧವಾಗಿದೆ ಎಂದಿದ್ದಾರೆ.