ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇನ್ನು 2 -3 ದಿನಗಳಲ್ಲಿ ಒನ್ ರ್ಯಾಂಕ್, ಒನ್ ಪೆನ್ಷನ್ ಯೋಜನೆಯನ್ನು ಘೋಷಿಸುವ ನಿರೀಕ್ಷೆ ಇದೆ.
ಐದು ವರ್ಷಗಳಿಗೊಮ್ಮೆ ನಿವೃತ್ತ ಸೈನಿಕರ ಪಿಂಚಣಿಯನ್ನು ಪರಿಷ್ಕರಿಸುವ ನಿಲುವನ್ನು ಸಡಿಲಿಸದೆ, ಮೋದಿ ಸರ್ಕಾರ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಜಾರಿಗೊಳಿಸಲಿದೆ. ಆದರೆ ಆಮರಣಾಂತ ಉಪವಾಸ ಕೈಗೊಂಡಿರುವ ನಿವೃತ್ತ ಯೋಧರು, ವಾರ್ಷಿಕ ಪರಿಷ್ಕರಣೆಗಾಗಿ ಆಗ್ರಹಿಸುತ್ತಿದ್ದಾರೆ.
ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆಯಲ್ಲಿ ನಿವೃತ್ತ ಸೈನಿಕರಿಗೆ ಸರಾಸರಿ ಪಿಂಚಣಿಯನ್ನು ನೀಡಲಾಗುತ್ತದೆ. ಪ್ರಸ್ತುತ ಸರಾಸರಿಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವ ನಿವೃತ್ತ ಯೋಧರಿಗೆ ಒ ಆರ್ ಒಪಿಯಿಂದ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ.
ಒನ್ ರ್ಯಾಂಕ್ ಒನ್ ಪೆನ್ಷನ್ ನನ್ನು ತ್ವರಿತವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕಳೆದ ಎರಡು ತಿಂಗಳಿನಿಂದ ನಿವೃತ್ತ ಸೈನಿಕರು ಪ್ರತಿಭಟನೆ ನಡೆಸುತ್ತಿದ್ದು ಒಂದು ತಿಂಗಳಿನಿಂದ ಆಮರಣಾಂತ ಉಪವಾಸ ಪ್ರಾರಂಭಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಉದ್ದೇಶಿಸಿರುವ ನಿವೃತ್ತ ಯೋಧರು ಶೀಘ್ರವೇ ಯೋಜನೆ ಜಾರಿಗೊಳಿಸುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಒ ಆರ್ ಒಪಿ ಜಾರಿ ಮತ್ತಷ್ಟು ವಿಳಂಬವಾದರೆ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.