ಮುಂಬೈ: ಶೀನಾ ಬೋರಾ ಹತ್ಯಾ ಪ್ರಕರಣದ ಪ್ರಮುಖ ರೂವಾರಿ ಇಂದ್ರಾಣಿ ಮುಖರ್ಜಿ ತನ್ನ ಉತ್ತಮ ಸ್ನೇಹಿತೆಯಾಗಿದ್ದು, ಶೀಘ್ರದಲ್ಲೇ ಆಕೆಯ ಕುರಿತು ಚಿತ್ರವೊಂದನ್ನು ತಯಾರಿಸುತ್ತೇನೆ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿದ್ದಾರೆ.
ದೇಶಾದ್ಯಂತ ಚರ್ಚಿತವಾಗುತ್ತಿರುವ ಶೀನಾ ಬೋರಾ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತ ತನಿಖಾಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರೆ, ಇತ್ತ ಬಾಲಿವುಡ್ ನಟಿ ರಾಖಿ ಸಾವಂತ್ ಇಂದ್ರಾಣಿ ಮುಖರ್ಜಿ ಬಗ್ಗೆ ತಮಗೆ ಸಾಕಷ್ಟು ಮಾಹಿತಿಗಳು ತಿಳಿದಿವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅಲ್ಲದೆ ಶೀನಾ ಬೋರಾ ಹತ್ಯಾ ಪ್ರಕರಣದ ಬಗ್ಗೆಯೂ ತಮಗೆ ತಿಳಿದಿದ್ದು, ಈ ಬಗ್ಗೆ ಚಿತ್ರವೊಂದನ್ನು ಮಾಡುತ್ತಿದ್ದೇನೆ ಎಂದು ರಾಖಿ ಹೇಳಿಕೊಂಡಿದ್ದಾರೆ.
ಮುಂಬೈನಲ್ಲಿ ಚಿತ್ರವೊಂದರ ಚಿತ್ರೀಕರಣದ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ರಾಖಿ ಸಾವಂತ್ , ಇಂದ್ರಾಣಿ ಮುಖರ್ಜಿ ಮತ್ತು ಆಕೆಯ ಪತಿ ಪೀಟರ್ ಮುಖರ್ಜಿ ನನಗೆ ತುಂಬಾ ವರ್ಷಗಳಿಂದಲೂ ಪರಿಚಯ. ನಾನು ಅವರ ಚಾನೆಲ್ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ವಿಜೇತಳಾಗಿದ್ದೆ. ಶೀನಾ ಹತ್ಯೆ ಪ್ರಕರಣದಲ್ಲಿ ಇಂದ್ರಾಣಿಯ ಕೈವಾಡದ ವಿಚಾರ ಕೇಳಿ ನಾನು ನಿಜಕ್ಕೂ ಆಘಾತಕ್ಕೆ ಒಳಗಾಗಿದ್ದೆ ಎಂದು ಹೇಳಿದ್ದಾರೆ.
ಅಲ್ಲದೆ ಶೀನಾ ಬೋರಾ ಇಂದ್ರಾಣಿ ಮುಖರ್ಜಿಯ ಮಗಳಲ್ಲ ಎಂದು ಹೇಳಿರುವ ರಾಖಿ, ಆಕೆ ಇಂದ್ರಾಣಿಯನ್ನು ದೀದಿ (ಅಕ್ಕ) ಎಂದು ಕರೆಯುತ್ತಿದ್ದಳು ಎಂದು ರಾಖಿ ಹೇಳಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು "ಏಕ್ ಕಹಾನಿ ಜೂಲಿ" ಎಂಬ ಚಿತ್ರವೊಂದನ್ನು ಮಾಡುತ್ತಿದ್ದು, ಚಿತ್ರದಲ್ಲಿ ಶೀನಾ ಬೋರಾ ಹತ್ಯಾ ಪ್ರಕರಣವೇ ಪ್ರಮುಖ ಭಾಗವಾಗಿರುತ್ತದೆ. ಅಲ್ಲದೆ ಇಂದ್ರಾಣಿ ಮುಖರ್ಜಿಯ ಜೀವನ ಮತ್ತು ಶೀನಾಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ ಆಕೆ ಅದಾವ ಒತ್ತಡಕ್ಕೆ ಒಳಗಾಗಿ ಆಕೆಯನ್ನು ಕೊಲ್ಲಲು ಮುಂದಾದಳು. ಮತ್ತು ಆಕೆಯ ಈ ಕೆಲಸದ ಹಿಂದಿದ್ದ ಪರಿಸ್ಥಿತಿ ಮತ್ತು ವ್ಯಕ್ತಿಗಳ ಕುರಿತು ಈ ಚಿತ್ರ ಮಾಹಿತಿ ನೀಡಲಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ.
ಇನ್ನು ತನಿಖಾ ಹಂತದಲ್ಲಿರುವ ಪ್ರಕರಣದ ಕುರಿತು ಬಹಿರಂಗ ಹೇಳಿಕೆ ನೀಡುತ್ತಿರುವ ಹಿನ್ನಲೆಯಲ್ಲಿ ಕಾನೂನು ಕ್ರಮದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಖಿ, ಜನತೆ, ಪೊಲೀಸ್ ಮತ್ತು ಮಾಧ್ಯಮಗಳಿಗೆ ತಿಳಿಯದ ವಿಚಾರಗಳು ತಮಗೆ ತಿಳಿದಿದ್ದು, ಎಲ್ಲವನ್ನೂ ಈ ಚಿತ್ರದಲ್ಲಿ ಜನತೆಯ ಮುಂದೆ ಬಿಚ್ಚಿಡಲಿದ್ದೇನೆ. ಈ ಹಿಂದೆಯೂ ಒಮ್ಮೆ ಇಂದ್ರಾಣಿಯನ್ನು ಭೇಟಿಯಾಗದಲು ಪ್ರಯತ್ನಿಸಿದ್ದೆ. ಆದರೆ ಪೊಲೀಸರು ಅದಕ್ಕೆ ಅನುವು ಮಾಡಿಕೊಟ್ಟಿರಲಿಲ್ಲ. ಪ್ರಕರಣ ಸಂಬಂಧ ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ. ಪ್ರಕರಣದಲ್ಲಿ ಸಮಾಜದ ಗಣ್ಯಾತಿ ಗಣ್ಯರು ಭಾಗಿಯಾಗಿದ್ದು, ಅವರ ಹೆಸರನ್ನು ಹೆಳಲಿಚ್ಛಿಸುವುದಿಲ್ಲ. ಆದರೆ ಇಂದ್ರಾಣಿಯನ್ನು ಕೂಡಲೇ ಬಂಧಮುಕ್ತಗೊಳಿಸಬೇಕಿದೆ ಎಂದು ರಾಖಿ ಹೇಳಿದ್ದಾರೆ.
ಇದೇ ವೇಳೆ ಇಂದ್ರಾಣಿ ಮತ್ತು ಶೀನಾ ಬೋರಾ ಅವರ ವೈಯುಕ್ತಿಕ ವಿಚಾರಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ಒಪ್ಪದ ರಾಖಿ, ಸಿಬಿಐ ತನಿಖಾಧಿಕಾರಿಗಳು ತನ್ನ ಬೆನ್ನ ಹಿಂದೆ ಬೀಳುವುದು ನನಗಿಷ್ಟವಿಲ್ಲಯ ಹೀಗಾಗಿ ಎಲ್ಲವನ್ನೂ ಚಿತ್ರದಲ್ಲಿ ಜನರ ಮುಂದಿಡುತ್ತೇನೆ ಎಂದು ಹೇಳಿ ನಕ್ಕರು.