ನವದೆಹಲಿ: ಧರ್ಮದ ಹೆಸರಿನಲ್ಲಿ ವಿಶ್ವ ಹಿಂದೂ ಪರಿಷತ್ ದೇಶವನ್ನು ವಿಭಜಿಸುತ್ತಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.ಮುಸಲ್ಮಾನರು ತಮ್ಮ ಧರ್ಮದವರ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲೆಡೆ ಪ್ರಚಾರ ನಡೆಸುತ್ತಿದ್ದಾರೆ ಎಂಬ ವಿಎಚ್ ಪಿ ಮುಖಂಡ ಅಶೋಕ್ ಸಿಂಘಾಲ್ ಅವರ ಟೀಕೆ ಪ್ರಜಾಪ್ರಭುತ್ವ ತತ್ವಕ್ಕೆ ಸಂಪೂರ್ಣವಾಗಿ ವಿರೋಧವಾಗಿದೆ ಎಂದು ಹೇಳಿದೆ.
ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಅಭ್ಯಾಸ ವಿಎಚ್ ಪಿಗೆ. ಅದರಿಂದ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿಎಲ್ ಪುನಿಯಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ನಮ್ಮ ದೇಶದ ಜನಸಂಖ್ಯೆಯನ್ನು ಹತೋಟಿಯಲ್ಲಿಡಲು ಮುಸಲ್ಮಾನರ ಕೊಡುಗೆಯಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ಮಕ್ಕಳನ್ನು ಪಡೆಯುವುದು ಸಂಪೂರ್ಣವಾಗಿ ಖಾಸಗಿ ವಿಚಾರ. ಅದಕ್ಕೆ ವಿಎಚ್ ಪಿ ಮುಖಂಡರು ನೀಡುವ ಹೇಳಿಕೆ ಸರಿಯಲ್ಲ ಎಂದು ಪ್ರತಿಪಾದಿಸಿದರು.
ನಿನ್ನೆ ವಿಎಚ್ ಪಿ ಮುಖಂಡರು ಕಾರ್ಯಕ್ರಮವೊಂದರಲ್ಲಿ ಮುಸಲ್ಮಾನರು ಈ ದೇಶದ ಜನಸಂಖ್ಯೆಯನ್ನು ಹತೋಟಿಯಲ್ಲಿಡಲು ಇತರ ಧರ್ಮದವರೊಂದಿಗೆ ಸಹಕರಿಸುವ ಬದಲು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.