ಬೆಂಗಳೂರು: ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ವಿಶೇಷ ಆದ್ಯತೆ ನೀಡುತ್ತಿದ್ದು, ಶ್ರೀಕೃಷ್ಣ ಮತ್ತು ಶ್ರೀರಾಮ ಸರ್ಕ್ಯೂಟ್ ಸೃಷ್ಟಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಹೃದಯ್' ಯೋಜನೆ ಮುಖಾಂತರ ದೇಶದ ಐತಿಹಾಸಿಕ ನಗರಗಳ ಅಭಿವೃದ್ಧಿಗೆ 500 ಕೋಟಿ ರು. ಬಳಸಲಾಗುತ್ತಿದೆ. ಇದರಲ್ಲಿ ವಾರಣಾಸಿ, ಗಯಾ, ಪುರಿ ಸೇರಿದಂತೆ ಕರ್ನಾಟಕದ ಬದಾಮಿ ಸಹ ಸೇರಿದೆ. `ಪ್ರಸಾದ್' ಹೆಸರಿನ ಧಾರ್ಮಿಕ ಕ್ಷೇತ್ರಗಳ ಪ್ರದೇಶ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಬುದ್ಧ ಸರ್ಕ್ಯೂಟ್ ಇನ್ನಷ್ಟು ಅಭಿವೃದ್ಧಿಪಡಿಸುವ ಜೊತೆಗೆ ಶ್ರೀರಾಮ ಮತ್ತು ಶ್ರೀಕೃಷ್ಣ ಸರ್ಕ್ಯೂಟ್ ಅಭಿವೃದ್ಧಿಪಡಿಸಲಾಗುತ್ತಿದೆ.
ಶ್ರೀರಾಮ ಮತ್ತು ಶ್ರೀಕೃಷ್ಣರ ಅವತಾರದಲ್ಲಿ ಬರುವ ಊರುಗಳು ಈ ಸರ್ಕ್ಯೂಟ್‍ನಲ್ಲಿ ಸೇರಲಿವೆ ಎಂದರು. ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಕೈಗೊಂಡ ಹಲವು ಪ್ರವಾಸೋದ್ಯಮ ಸ್ನೇಹಿ ಕ್ರಮದಿಂದಾಗಿ ಅಂತಾರಾಷ್ಟ್ರೀಯ ಪ್ರವಾಸಿಗರ ಭೇಟಿ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.9ರಷ್ಟು ಅಂತಾರಾಷ್ಟ್ರೀಯ ಪ್ರವಾಸಿಗರು ದೇಶಕ್ಕೆ ಬಂದಿದ್ದಾರೆ. ಜೊತೆಗೆ ದೇಶದ ಆತಿಥ್ಯಮತ್ತು ಪ್ರವಾಸೋದ್ಯಮ ಕ್ಷೇತ್ರ ಶೇ.15 ಅಭಿವೃದ್ಧಿ ದಾಖಲಿಸಿದೆ ಎಂದು ತಿಳಿಸಿದರು.