ದೇಶ

ಮುಂಬೈ ಪೊಲೀಸ್‌ ಆಯುಕ್ತ ರಾಕೇಶ್ ಮಾರಿಯಾ ದಿಢೀರ್ ವರ್ಗಾವಣೆ

Srinivasamurthy VN

ಮುಂಬೈ: ಇಡೀ ದೇಶದ ಗಮನ ಸೆಳೆದಿದ್ದ ಶೀನಾ ಬೋರಾ ಹತ್ಯಾ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿದ್ದ ಮುಂಬೈ ಪೊಲೀಸ್‌ ಆಯುಕ್ತ ರಾಕೇಶ್ ಮಾರಿಯಾ ಅವರನ್ನು  ಮಂಗಳವಾರ ದಿಢೀರ್ ವರ್ಗಾವಣೆ ಮಾಡಲಾಗಿದೆ.

ಮೂಲಗಳ ಪ್ರಕಾರ ಮುಂಬೈ ಪೊಲೀಸ್‌ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ರಾಕೇಶ್ ಮಾರಿಯಾ ಅವರನ್ನು ಮಹಾರಾಷ್ಟ್ರ ಸರ್ಕಾರ ವರ್ಗಾವಣೆ ಮಾಡಿದ್ದು, ಅವರನ್ನು ಗೃಹ ರಕ್ಷಕದಳದ  ಡಿಜಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಾಧ್ಯಮ ಕ್ಷೇತ್ರದ ದೈತ್ಯ ಉದ್ಯಮಿ ಎಂದೇ ಖ್ಯಾತರಾಗಿದ್ದ 9ಎಕ್ಸ್ ಸಮೂಹ ಸಂಸ್ಥೆಯ ಮಾಲಕಿ ಇಂದ್ರಾಣಿ ಮುಖರ್ಜಿ ಮತ್ತು  ಆಕೆಯ ಮಾಜಿ ಪತಿ ಸಜೀವ್ ಖನ್ನಾ ಹಾಗೂ ಕಾರು ಚಾಲಕ ಶ್ಯಾಮ್ ರೈ ಎಂಬಾತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸುತ್ತಿದ್ದು, ದಿನಕ್ಕೊಂದು ಸ್ಫೋಟಕ ಮಾಹಿತಿಗಳು  ಹೊರಬೀಳುತ್ತಿವೆ.

ಈ ಹಂತದಲ್ಲಿ ರಾಕೇಶ್ ಮಾರಿಯಾ ಅವರ ದಿಢೀರ್ ವರ್ಗಾವಣೆ ಪ್ರಕರಣದ ತನಿಖೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಶಂಕೆಯೂ ವ್ಯಕ್ತವಾಗುತ್ತಿದೆ. ಇನ್ನು ಸರ್ಕಾರದ ಕ್ರಮದ ಕುರಿತು  ಹಲವು ಶಂಕೆಗಳು ವ್ಯಕ್ತವಾಗುತ್ತಿದ್ದು, ಇಡೀ ದೇಶದ ಗಮನ ಸೆಳೆದಿದ್ದ ಹೈ ಪ್ರೊಫೈಲ್ ಹತ್ಯಾ ಪ್ರಕರಣದ ತನಿಖೆ ನಿರ್ಣಾಯಕ ಹಂತದಲ್ಲಿರುವಾಗ ತನಿಖೆಯ ಜವಾಬ್ದಾರಿ ಹೊತ್ತಿದ್ದ ಹಿರಿಯ  ಪೊಲೀಸ್ ಅಧಿಕಾರಿಯನ್ನು ವರ್ಗ ಮಾಡುವ ಜರೂರತ್ತು ಏನಿತ್ತು ಎನ್ನುವ ಕುರಿತು ಹಲವು ಅನುಮಾನಗಳು ಮೂಡುತ್ತಿವೆ. ಇನ್ನು ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ವರೆಗೂ ಮಹಾರಾಷ್ಟ್ರ  ಸರ್ಕಾರವಾಗಲಿ ಅಥವಾ ಮುಂಬೈ ಪೊಲೀಸ್ ಇಲಾಖೆಯಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

SCROLL FOR NEXT