ನವದೆಹಲಿ: ನಮ್ಮ ದೇಶದಲ್ಲಿ ಹೆಚ್ಚಿನ ಸಾಕ್ಷರತೆಯ ಗುರಿಯನ್ನು ಸಾಧಿಸಲು ಸಮಾಜದ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಪ್ರತಿಪಾದಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಶಿಕ್ಷಣವಿಲ್ಲದಿದ್ದರೆ ಭಾರತ ವಿಶ್ವದಲ್ಲಿ ಹೆಮ್ಮೆಯ ರಾಷ್ಟ್ರ ಎಂದು ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ನಡೆದ ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಕ್ಷರ ಭಾರತ ಮತ್ತು ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿ, ಸಬಲೀಕರಣ ಮತ್ತು ಸಂರಕ್ಷಣೆ ಗುರಿಗಳನ್ನು ಕೇವಲ ಶಿಕ್ಷಣದಿಂದ ಮಾತ್ರ ಪಡೆಯಲು ಸಾಧ್ಯ ಎಂದು ಹೇಳಿದರು.
ಸಮಾಜದ ಎಲ್ಲಾ ವರ್ಗದ ಜನರು ಪಾಲ್ಗೊಳ್ಳುವುದರಿಂದ ಮಾತ್ರ ಸಾಕ್ಷರತೆಯ ಗುರಿಯನ್ನು ಸಾಧಿಸಬಹುದು ಎಂದು ರಾಷ್ಟ್ರಪತಿ ಹೇಳಿದರು. ಅವರು ಇದೇ ಸಂದರ್ಭದಲ್ಲಿ ಯುನೆಸ್ಕೋದ ಘೋಷವಾಕ್ಯವಾದ ' ಪ್ರತಿಯೊಬ್ಬರು ಕಲಿಯಿರಿ'ಯನ್ನು ಉಲ್ಲೇಖಿಸಿದರು.
ನಮ್ಮ ದೇಶದ ಸಾಕ್ಷರತಾ ಪ್ರಮಾಣ 1951ರಲ್ಲಿ ಶೇಕಡಾ 18ರಷ್ಟಿತ್ತು. 2011ರಲ್ಲಿ ಅದು ಶೇಕಡಾ 72.5ರಷ್ಟಾಗಿದೆ. ಆದರೂ ಕೂಡ ನಾವು ಹಿಂದಿದ್ದೇವೆ. ಆದರೆ ದಕ್ಷಿಣ ಏಷ್ಯಾದ ಅಬಿವ-ದ್ಧಿ ಹೊಂದುತ್ತಿರುವ ದೇಶಗಳ ಸಾಕ್ಷರತಾ ಪ್ರಮಾಣ ಶೇಕಡಾ 100ರಷ್ಟಿದೆ. 12ನೇ ಪಂಚವಾರ್ಷಿಕ ಯೋಜನೆ ಮುಗಿಯುವ ಹೊತ್ತಿಗೆ ಶೇಕಡಾ 80ರಷ್ಟು ಸಾಕ್ಷರತಾ ಪ್ರಮಾಣ ತಲುಪುವ ಗುರಿ ಹೊಂದಲಾಗಿದ್ದು, ಶಿಕ್ಷಣದಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸಿದರೆ ಗುರಿಯನ್ನು ತಲುಪಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಮುಂದಿನ ವರ್ಷ ಮಾರ್ಚ್ ವೇಳೆಗೆ ಸಂಸದರ ಆದರ್ಶ ಗ್ರಾಮಗಳಲ್ಲಿ ಶೇಕಡಾ 100 ರಷ್ಟು ಸಾಕ್ಷರತೆ ಸಾಧಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸಂಸದರು ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ದೇಶದ 410 ಜಿಲ್ಲೆಗಳ ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.