ಪುಣೆ: ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಶಿಕ್ಷಣ ಸಂಸ್ಥೆ(ಎಫ್ ಟಿಐಐ)ಯ ಅಧ್ಯಕ್ಷ ಗಜೇಂದ್ರ ಚೌಹಾಣ್ ನೇಮಕವನ್ನು ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ.
ಎಫ್.ಟಿ.ಐ.ಐ ನ ಮೂವರು ವಿದ್ಯಾರ್ಥಿಗಳು ಸೆ.10 ರಿಂದ ಆಮರಣಾಂತ ಉಪವಾಸ ಕೈಗೊಂಡಿದ್ದು ಗಜೇಂದ್ರ ಚೌಹಾಣ್ ಅವರನ್ನು ಎಫ್.ಟಿಐಐ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿದ್ದಾರೆ.
ಗಜೇಂದ್ರ ಚೌಹಾಣ್ ಅವರನ್ನು ವಜಾಗೊಳಿಸಲು ಆಗ್ರಹಿಸಿ ಎಫ್.ಟಿ.ಐ.ಐ ನ ವಿದ್ಯಾರ್ಥಿಗಳು 91 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮೂವರು ವಿದ್ಯಾರ್ಥಿಗಳು ಆಮರಣಾಂತ ಉಪವಾಸ ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಜೂನ್ 12 ರಿಂದ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಗಜೇಂದ್ರ ಚೌಹಾಣ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವವರೆಗೂ ಆಮರಣಾಂತ ಉಪವಾಸ ಮುಂದುವರೆಸುತ್ತೇವೆ ಎಂದು ಹರಿಲಾಲ್, ಅಲೋಲ್ ಅರೋರಾ ಹಾಗೂ ಹಿಮಾಂಶು ಶೇಖರ್ ತಿಳಿಸಿದ್ದಾರೆ. ಪ್ರಸ್ತುತ ಆಮರಣಾಂತ ಉಪವಾಸ ಕೈಗೊಂಡಿರುವ ವಿದ್ಯಾರ್ಥಿಗಳ ಆರೋಗ್ಯ ಏರುಪೇರಾದರೆ, ಮತ್ತೊಂದು ತಂಡದ ವಿದ್ಯಾರ್ಥಿಗಳು ಉಪವಾಸ ಆರಂಭಿಸಲಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಫ್ ಟಿಐಐ ನಿರ್ದೇಶಕ ಪ್ರಶಾಂತ್ ಪಥ್ರಾಬೆ, ಆಮರಣಾಂತ ಉಪವಾಸದ ಬಗ್ಗೆ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದೆವೆ ಎಂದು ತಿಳಿಸಿದ್ದಾರೆ.